District Level Khokho Tournament in anekal 
ಜಿಲ್ಲೆ

ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಆನೇಕಲ್
ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವಲ್ಲಿ ಪಂದ್ಯಾವಳಿಗಳು ನೆರವಾಗಿವೆ. ಖೋ ಖೋ ದೇಸೀ ಕ್ರೀಡೆಯಾಗಿದ್ದು, ಎಲ್ಲರೂ ಖುಷಿಯಿಂದ ಪಾಲ್ಗೊಳ್ಳಬೇಕು ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ಪಟ್ಟಣದ ಎಎಸ್‌ಬಿ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಖೋಖೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಉತ್ತಮ ಸಾಧನೆ ಮಾಡಿ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಪಾಲ್ಗೊಳ್ಳುವಂತಾಗಬೇಕು. ಕ್ರೀಡೆಗಳಿಗೆ ಅವಶ್ಯಕ ತರಬೇತಿ ನೀಡಲು ಅನುಕೂಲವಾಗುವಂತೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ನಗರ ಜಿಲ್ಲೆಯ ಐದು ವಲಯಗಳ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿಬ್ಲೂಮ್ ಶಾಲೆ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಆನೇಕಲ್ ತಾಲೂಕಿನ ಜಿಗಣಿ ನಿತ್ಯಾನಂದ ಶಾಲೆ ಪ್ರಥಮ, 17ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಆನೇಕಲ್‌ನ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಪ್ರಥಮ, ಖೋಖೋನಲ್ಲಿ ಆನೇಕಲ್‌ನ ದೊಮ್ಮಸಂದ್ರದ ಡಿಎಂಎಂ ಪ್ರೌಢ ಶಾಲೆಯು ದ್ವಿತೀಯ ಸ್ಥಾನ ಗಳಿಸಿತು.
ಪುರಸಭೆ ಸದಸ್ಯರಾದ ಎನ್.ಎಸ್.ಪದ್ಮನಾಭ, ಮುನಾವರ್, ರಾಜೇಂದ್ರ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ನೇತ್ರಾವತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ್, ಶ್ರೈನ್ ಕಾಲೇಜಿನ ವೆಂಕಟಸ್ವಾಮಿರೆಡ್ಡಿ, ಮಿಥುನ್ ರೆಡ್ಡಿ, ಖೋಖೋ ಅಮೆಚೂರ್ ಅಸೋಸಿಯೇಷನ್ ಕಾರ್ಯದರ್ಶಿ ಚಿನ್ನಮೂರ್ತಿ, ನಿವೃತ್ತ ದೈಹಿಕ ಶಿಕ್ಷಕರಾದ ಟಿ.ರಾಮಸ್ವಾಮಿ, ಸಿ.ಜಗದೀಶ್ವರಯ್ಯ ಇದ್ದರು.