ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಶೀಘ್ರವೇ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಉದ್ಯೋಗ ಆಕಾಂಕ್ಷಿಗಳು ಮತ್ತು ಉದ್ಯೋಗದಾತರು ಅವಕಾಶ ಸದುಪಯೋಗ ಪಡೆದು ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಹಾಗೂ ಕೈಗಾರಿಕೆ ಸಂಘಗಳ ಪ್ರತಿನಿಧಿಗಳೊಂದಿಗೆ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಯುವ ನಿಧಿ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆ ಸುಮಾರು 6 ಸಾವಿರ ಫಲಾನುಭವಿಗಳಿದ್ದಾರೆ. ಇವರಿಗೆ ಅಗತ್ಯ ತರಬೇತಿ ನೀಡುವ ಕಾರ್ಯದಲ್ಲಿ ಕೈಗಾರಿಕೆಗಳು ಕೈ ಜೋಡಿಸಬೇಕು. ಜಿಲ್ಲೆ ಸೇರಿ ಉತ್ತರ ಕರ್ನಾಟಕದಲ್ಲಿ ಹೇರಳವಾದ ಮಾನವ ಸಂಪನ್ಮೂಲವಿದೆ. ಇವರಿಗೆ ಅಗತ್ಯ ಕೌಶಲ ತರಬೇತಿ ನೀಡಬೇಕು ಎಂದರು.
ಜಿಲ್ಲೆಯ ಎಲ್ಲ ಪದವಿ, ಐಟಿಐ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುಮಾರು 10 ಸಾವಿರ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯ ಬೇಲೂರು, ತಾರಿಹಾಳ ಮತ್ತು ಸತ್ತೂರ ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕೋದ್ಯಮಿಗಳೂ ಭಾಗವಹಿಸಲಿದ್ದಾರೆ ಎಂದರು.
ಹುಬ್ಬಳ್ಳಿ ಚೇಂಬರ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಪಿ.ಸಂಶಿಮಠ, ಧಾರವಾಡ ಕೈಗಾರಿಕಾ ಬೆಳೆವಣಿಗೆ ಕೇಂದ್ರದ ಉಪಾಧ್ಯಕ್ಷ ಶಿರೀಶ ಉಪ್ಪಿನ ಮಾತನಾಡಿದರು. ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು, ಐಟಿಐ, ಕಾಲೇಜು ಶಿಕ್ಷಣ ಇಲಾಖೆ, ಮಹಾನಗರ ಪಾಲಿಕೆ, ಉದ್ಯೋಗ ವಿನಿಮಯ ಇಲಾಖೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರಿ ಸ್ವಾಗತಿಸಿದರು. ಜಿಪಂ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ವಂದಿಸಿದರು.