ಮುದ್ದೇಬಿಹಾಳ ನಾಲತವಾಡ ರಸ್ತೆಪಕ್ಕದ ಮಹೆಬೂಬನಗರ ಹೊರವಲಯದ ಅಂದಾಜು 50 ಎಕರೆ ಜಮೀನಿನಲ್ಲಿ ಹಾಕಿರುವ ಶಾಮಿಯಾನ. 
ಜಿಲ್ಲೆ

ಜಿಲ್ಲಾಮಟ್ಟದ ಇಸ್ತೇಮಾ ಸಮಾವೇಶ ಆರಂಭ

Vijayapura - Desk - Parashuram Keri

ಮುದ್ದೇಬಿಹಾಳ: ಮಹೆಬೂಬನಗರ ಹೊರವಲಯದ ನಾಲತವಾಡ ರಸ್ತೆ ಪಕ್ಕದ ಅಂದಾಜು 50 ಎಕರೆ ವಿಸ್ತಾರವಾದ ಜಮೀನಿನಲ್ಲಿ ಹಾಕಿರುವ ವಿಶಾಲವಾದ ಶಾಮಿಯಾನದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಜಿಲ್ಲಾಮಟ್ಟದ ಮುಸ್ಲಿಂ ಸಮುದಾಯದ ತಬಲಿಖಿ ಇಸ್ತೇಮಾ ಸಮಾವೇಶಕ್ಕೆ ಸಹಸ್ರಾರು ಜನರು ಸೇರಿದ್ದಾರೆ.

ಮುದ್ದೇಬಿಹಾಳದಲ್ಲಿ 13ವರ್ಷಗಳ ನಂತರ ನಡೆಯುತ್ತಿರುವ ಎರಡನೇ ಬೃಹತ್ ಇಸ್ತೇಮಾ ಇದಾಗಿದೆ. ನಾಯ್ಕೋಡಿ ಎನ್ನುವವರಿಗೆ ಸೇರಿದ 50 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿಯನ್ನು ಇಸ್ತೇಮಾ ಹಿನ್ನೆಲೆಯಲ್ಲಿ ತೆಗೆದು ನೆಲವನ್ನು ಸಮತಟ್ಟು ಮಾಡಿ ಅಲ್ಲಲ್ಲಿ ಟೆಂಟ್, ಶಾಮಿಯಾನ, ತಾತ್ಕಾಲಿಕ ಶೌಚಗೃಹ, ನೀರಿನ ವ್ಯವಸ್ಥೆ, ನಮಾಜ ಸ್ಥಳ ಹೀಗೆ ಹತ್ತು ಹಲವು ಮೂಲಸೌಕರ್ಯಗಳ ಉಪ ವಿಭಾಗಗಳನ್ನು ಸ್ಥಳೀಯರೊಡಗೂಡಿ ಸಿದ್ಧಗೊಳಿಸಲಾಗಿದೆ. ಸ್ಥಳೀಯರೊಂದಿಗೆ ಪುರಸಭೆಯವರು ಕೈಜೋಡಿಸಿದ್ದು ವಿಶೇಷವಾಗಿತ್ತು.

ವಿವಿಧ ಜವಾಬ್ಧಾರಿಗಳನ್ನು ಹಂಚಿಕೊಂಡಿರುವ ತಾಲೂಕುವಾರು ಸಮುದಾಯದ ಯುವಕರು ಹೆಚ್ಚಿನ ಉತ್ಸಾಹದಿಂದ ಇಸ್ತೇಮಾ ಯಶಸ್ಸಿಗೆ ಸಹಕರಿಸುತ್ತಿದ್ದಾರೆ. ಬಸವನಬಾಗೇವಾಡಿ ಡಿಎಸ್‌ಪಿ, ಮುದ್ದೇಬಿಹಾಳ ಸಿಪಿಐ, ಮುದ್ದೇಬಿಹಾಳ, ತಾಳಿಕೋಟೆ ಪಿಎಸ್‌ಐಗಳು, ಎಎಸ್‌ಐಗಳು, ಎಚ್‌ಪಿಡಿ, ಡಬ್ಲುಪಿಸಿ, ಕಾನ್ಸಟೇಬಲ್, 2 ರಿಜರ್ವ್ ಪೊಲೀಸ್ ವ್ಯಾನ್ ಸೇರಿ ಅಂದಾಜು 100 ಪೊಲೀಸರು ಭದ್ರತೆ ಒದಗಿಸಿದ್ದಾರೆ. ಇಸ್ತೇಮಾದಲ್ಲಿ ಪಾಲ್ಗೊಳ್ಳಲು ಬರುವವರಿಗೆ ನಾಗಠಾಣ ಪೆಟ್ರೋಲ್ ಪಂಪ್ ಬಳಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಶುಕ್ರವಾರ ಸಂಜೆಯಿಂದಲೇ ಬೇರೆ ಕಡೆಯಿಂದ ಬಂದ ಜನರಿಗೆ ಎಲ್ಲ ವ್ಯವಸ್ಥೆ ಕಲ್ಪಿಸಿ ಅನುಕೂಲ ಮಾಡಿಕೊಡಲಾಗಿತ್ತು. ಶನಿವಾರ ಬೆಳಗ್ಗೆ 11ಕ್ಕೆ ಆರಂಭಗೊಂಡ ಇಸ್ತೇಮಾದಲ್ಲಿ ಕಿತಾಮ ತಾಲೀಮ, ನಮಾಜ ಪದ್ಧತಿ, ಬೋಧನೆ, ಮಧ್ಯರಾತ್ರಿ 2.30ಕ್ಕೆ ಅಲ್ಲಾಹನ ಪ್ರಾರ್ಥನೆ ನಡೆದವು. ಭಾನುವಾರ ಬೆಳಗ್ಗೆ ಮಕರೀಜ್ ನಮಾಜನಿಂದ ಆರಂಭಗೊಂಡು ರಾತ್ರಿ 8.30ರ ಕೊನೆಯ ನಮಾಜವರೆಗೆ ವಿವಿಧ ಧಾರ್ಮಿಕ ಚಟುವಟಿಕೆಗಳು, ಬೋಧನೆಗಳು ನಡೆಯಲಿವೆ.

ಬೆಂಗಳೂರಿನ ಹಾಜಿ ಫಾರುಕ್, ಅಕ್ಬರ್‌ಷರೀಫ್, ಮುಫ್ತಿ ಆಲಂ, ವಿಜಯಪುರದ ಮೌಲಾನಾ ಅಬೂಬಕರ್, ಹಜರತ್ ಯುಸೂಫ್ ಮತ್ತಿತರರು ಧರ್ಮಬೋಧನೆ ನಡೆಸಿಕೊಡುವರು. ನಮಾಜ, ರೋಜಾ, ಹಜ್, ಜಕಾತ್ ಕುರಿತು ಮತ್ತು ಅವುಗಳ ಮಹತ್ವ ಮತ್ತು ಮಾನವೀಯ ಮೌಲ್ಯಗಳ ಅವಶ್ಯಕತೆ ಕುರಿತು ತಿಳಿಹೇಳಲಾಗುತ್ತದೆ ಎಂದು ಇಸ್ತೇಮಾ ಸಂಚಾಲಕ ಅಬ್ದುಲ್‌ಜಬ್ಬಾರ್ ಮಕಾನದಾರ ತಿಳಿಸಿದರು.

ಶುಕ್ರವಾರ ಸಂಜೆ ಇಸ್ತೇಮಾ ಪೂರ್ವ ತಯಾರಿ ವೀಕ್ಷಿಸಲು ಆಗಮಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ. ಚೆನ್ನವೀರ ದೇವರು, ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ. ಅಸ್ಕಿ, ನಿವೃತ್ತ ಡಿವೈಎಸ್‌ಪಿ ಎಸ್.ಎಸ್. ಹುಲ್ಲೂರ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಕರ್ನಾಟಕ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮತ್ತಿತರರು ಮಾತನಾಡಿ, ಮನುಷ್ಯನಿಗೆ ಮಾನವೀಯತೆಯ ಮಹತ್ವ ತಿಳಿಸಿಕೊಡುವ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕುರಿತು ನಡೆಯಲಿರುವ ಈ ಬೃಹತ್ ಸಮಾವೇಶ ಮಾದರಿಯಾಗಿದೆ ಎಂದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್. ಮದರಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪುರಸಭೆ ಸದಸ್ಯರಾದ ಮಹಿಬೂಬ ಗೊಳಸಂಗಿ, ರಿಯಾಜ್ ಢವಳಗಿ, ಲಾಳೇಮಶ್ಯಾಕ ನಾಯ್ಕೋಡಿ, ಹುಸೇನ ನಾಯ್ಕೋಡಿ, ಉಮರ್ ಜಾನ್ವೇಕರ, ಅಲ್ಲಾಭಕ್ಷ ನಾಯ್ಕೋಡಿ, ಪಿಂಟು ಸಾಲಿಮನಿ, ಮೌಲಾನಾ ಅಬ್ದುಲ್ ಖಾಜಿ, ಸಿ.ಪಿ. ಸಜ್ಜನ, ಸುಧೀರ ನಾವದಗಿ, ಟಿ. ವಿಜಯಭಾಸ್ಕರ್, ಮುತ್ತುಗೌಡ ರಾಯಗೂಂಡ, ಅಶೋಕ ಚಟ್ಟೇರ, ರುದ್ರಗೌಡ ಅಂಗಡಗೇರಿ, ಪರಶುರಾಮ ನಾಲತವಾಡ, ಶರಣು ದೇಗಿನಾಳ, ಬಸಲಿಂಗಪ್ಪ ರಕ್ಕಸಗಿ, ಮಹಿಬೂಬ ಮುಲ್ಲಾ, ಹುಸೇನ್ ಮುಲ್ಲಾ, ಪಿಂಟು ಸಾಲಿಮನಿ, ನೂರೇನಬಿ ನದಾಫ ಇತರರರು ಪಾಲ್ಗೊಂಡಿದ್ದರು.