ಜಿಲ್ಲೆ

ಸೈನಿಕಳಾಗಿ ಕುಟುಂಬ ರಕ್ಷಿಸುವ ದಿಟ್ಟ ಮಹಿಳೆ...

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶ, ಮಾತೃಭೂಮಿಯನ್ನು ರಕ್ಷಿಸಲು ಸೈನಿಕರು ಪಣ ತೊಟ್ಟಿರುತ್ತಾರೆ. ಅದೇರೀತಿ ಓರ್ವ ಮಹಿಳೆ ತನ್ನ ಕುಟುಂಬದಲ್ಲಿ ಎದುರಾಗುವ ಎಲ್ಲ ಸುಖ, ದು:ಖ, ಕಷ್ಟ, ಕಾರ್ಪಣ್ಯ ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿಭಾಯಿಸಿ ಕುಟುಂಬದಲ್ಲಿ ಸೈನಿಕಳಂತೆ ತನ್ನನ್ನು ರೂಪಿಸಿಕೊಂಡಿದ್ದಾಳೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಹೆಣ್ಣನ್ನು ಗೌರವಿಸೋಣ

ಒಬ್ಬ ಪುರುಷನ ಜೀವನದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸುತ್ತಾಳೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಬಾಳಿಗೆ ಬೆಳಕಾಗುತ್ತಾಳೆ. ಸಮಾಜದ ಎಲ್ಲ ಕಟ್ಟುಪಾಡು ಎದುರಿಸಿಯೂ ಪುರುಷರಷ್ಟೇ ಸರಿ ಸಮಾನಳು ಎಂದು ಎಲ್ಲ ಕ್ಷೇತ್ರಗಳಲ್ಲಿಯೂ ಸಾಬೀತು ಮಾಡಿದ್ದಾಳೆ. ಅಂಥ ಹೆಣ್ಣನ್ನು ಗೌರವಿಸಿ, ಪೂಜ್ಯ ಭಾವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಉಪನ್ಯಾಸ

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ನಿರ್ಮಲಾ ಕುಮಾರಿ ಮಹಿಳೆಯರಿಗೆ ಕಾನೂನು ಅರಿವು ಕುರಿತು, ಉದ್ಯಮಿ ದಿವ್ಯಾ ರಾಣಿ ಆಧುನಿಕ ಮಹಿಳೆಯಲ್ಲಿ ಆತ್ಮ ವಿಶ್ವಾಸದಿಂದ ಪ್ರಗತಿಯತ್ತ ವಿಷಯ ಕುರಿತಾಗಿ ಉಪನ್ಯಾಸ ನೀಡಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುರಾಧಾ ಹಾದಿಮನೆ, ಮಠದ ನಾಗರಾಜ ಆಚಾರ್ಯ, ರಮೇಶ್​ ಭಟ್​, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೀಪಾ ಹಾಗೂ ಶಾರದಾ ಕಾರ್ಯಕ್ರಮ ನಿರೂಪಿಸಿದರು. ವಸಂತಿ ಕೊರಡ್ಕರ್​ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಮಹಿಳಾ ಸಂಘಟನೆಗಳು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು. ಮಹಿಳೆಯರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಇನ್ನೂ ಕೊನೆಯಾಗಿಲ್ಲ ಲಿಂಗ ತಾರತಮ್ಯ

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗಳ ಒಳಗೆ ಅವಕಾಶ ವಂಚಿತಳಾಗಿದ್ದ ಹೆಣ್ಣು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮೆರೆಯುತ್ತಿದ್ದಾಳೆ. ಆದರೆ, ಲಿಂಗ ತಾರತಮ್ಯ ಇನ್ನೂಸಹ ಸಾಮಾನ್ಯ ಎನ್ನುವಂತಾಗಿದೆ. ಅದನ್ನು ಹೋಗಲಾಡಿಸಿ ಮಹಿಳೆಗೂ ಗೌರವಾಯುತವಾದ ಹಾಗೂ ಸಮಾನ ಅವಕಾಶ ದೊರಕುವಂತಾಗಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಮಹಿಳೆಯರು ಯಶಸ್ಸು ಸಾಧಿಸಲು ಸಮಾಜದಲ್ಲಿ ಸುರಕ್ಷಿತ ಸ್ಥಳ ಸೃಷ್ಟಿಸಬೇಕು. ಸಮಾಜ ಹಾಗೂ ಕುಟುಂಬದವರು ಆಕೆಯ ಸಾಧನೆ ಕುರಿತು ಪ್ರಶ್ನಿಸುವ ಮನೋಭಾವದಿಂದ ಹೊರಗೆ ಬರಬೇಕು ಎಂದರು.