ಜಿಲ್ಲೆ

ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆ

ಆದರ್ಶ್. ಎಂ.ಕೆ.

ಮಡಿಕೇರಿ: ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡದ ೮ ವೈಯಕ್ತಿಕ ಹಾಗೂ ೮ ಸಮುದಾಯ ಹಕ್ಕುಗಳ ಅರ್ಜಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅನುಮೋದನೆ ದೊರೆಯಿತು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಪರಿಶಿಷ್ಟ ಪಂಗಡದ ೮ ವೈಯಕ್ತಿಕ ಹಾಗೂ ೮ ಸಮುದಾಯ ಹಕ್ಕುಗಳಿಗೆ ಅನುಮೋದನೆ ನೀಡಲಾಯಿತು.

ಈ ಕುರಿತು ಮಾತನಾಡಿದ ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ಪರಿಶಿಷ್ಟ ಪಂಗಡದ ೮ ವೈಯಕ್ತಿಕ ಹಾಗೂ ೮ ಸಮುದಾಯ ಸಂಪನ್ಮೂಲ ಅರ್ಜಿಗಳಿಗೆ ಉಪ ವಿಭಾಗ ಮಟ್ಟದಲ್ಲಿ ಅನುಮೋದನೆ ದೊರೆತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಅನುಮೋದಿಸಬೇಕಿದೆ ಎಂದು ಕೋರಿದರು.

ಪೊನ್ನಂಪೇಟೆ ತಾಲೂಕಿನ ಪರಿಶಿಷ್ಟ ಪಂಗಡದ ಕಾಡುಕುರುಬ ಸಮಾಜದ ತಿತಿಮತಿಯ ದೊಡ್ಡರೇಷ್ಮೆ ಹಡ್ಲುವಿನ ಬಿ.ಕೆ.ಸ್ವಾಮಿ, ಹಾಗೆಯೇ ನಾಲ್ಕೇರಿ ಗ್ರಾ.ಪಂ.ನ ಗೋಳಿಗದ್ದೆಯ ಪರಿಶಿಷ್ಟ ಪಂಗಡದ ಜೇನುಕುರುಬ ಜೆ.ಬೋಜಿ, ಜೆ.ಆರ್.ಸಣ್ಣಪ್ಪ, ಕುಶಾಲನಗರ ನಂಜರಾಯಪಟ್ಟಣ ಗ್ರಾ.ಪಂ.ವ್ಯಾಪ್ತಿಯ ವೈ.ಡಿ.ರಾಮು, ನಂಜರಾಯಪಟ್ಟಣದ ಬಿ.ಎಂ.ರಾಧ, ನಂಜರಾಯ ಪಟ್ಟಣದ ಬಿ.ಕೆ.ಚೆಲ್ಲಪ್ಪ, ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕಳುವಾರ ಹಾಡಿಯ ಚಂದ್ರಕಲಾ, ಚಿಕ್ಕಳುವಾರ ಹಾಡಿಯ ಬಸಪ್ಪ, ಚಿಕ್ಕಳುವಾರದ ಮರಿಯಪ್ಪ ಇವರ ವೈಯಕ್ತಿಕ ಅರ್ಜಿಗಳಿಗೆ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅನುಮೋದನೆ ದೊರೆಯಿತು.

ಸಮುದಾಯ ಹಕ್ಕುಗಳಿಗೆ ಸಂಬಂಧಿಸಿದಂತೆ ತಿತಿಮತಿ ಗ್ರಾ.ಪಂ.ವ್ಯಾಪ್ತಿಯ ದೊಡ್ಡರೇಷ್ಮೆ ಜೆ.ಬಿ.ರಾಮು ಹಾಗೂ ೯೬ ಜನ ಪರಿಶಿಷ್ಟ ಪಂಗಡದವರಿಗೆ, ಚೇಣಿಹಡ್ಲು ಹಾಡಿಯ ಪಿ.ಎಸ್.ಸುಬ್ಬ ಹಾಗೂ ೬೬ ಜನ ಪರಿಶಿಷ್ಟ ಪಂಗಡದವರಿಗೆ, ಬೊಂಬುಕಾಡು ಪಿ.ಕೆ.ರಾಮು ಹಾಗೂ ೪೧ ಜನ ಪರಿಶಿಷ್ಟ ಪಂಗಡದವರಿಗೆ, ಮಜ್ಜಿಗೆಹಳ್ಳ, ಆನೆ ಕ್ಯಾಂಪು, ಜೆ.ಬಿ.ಕುಮಾರ ಹಾಗೂ ೨೨ ಜನ ಪರಿಶಿಷ್ಟ ಪಂಗಡದವರಿಗೆ, ಆಯಿರಸುಳಿ ಪಿ.ಎಸ್.ರಾಮು ಹಾಗೂ ೪೬ ಜನ ಪರಿಶಿಷ್ಟ ಪಂಗಡದವರಿಗೆ, ಜಂಗಲ್‌ಹಾಡಿ ಪಿ.ಸಿ.ಮಾದ ಮತ್ತು ೩೨ ಜನ ಪರಿಶಿಷ್ಟ ಪಂಗಡದವರಿಗೆ, ಮಜ್ಜಿಗೆ ಹಳ್ಳ ಫಾರ್ಮ್ ಪಿ.ಎಂ.ಸುಬ್ಬಣ್ಣ ಹಾಗೂ ೬೩ ಜನ ಪರಿಶಿಷ್ಟ ಪಂಗಡದವರಿಗೆ, ಕಾರೆಕಂಡಿ ಹಾಡಿಯಲ್ಲಿ ಪಿ.ಎಸ್.ಪಾಪಣ್ಣ ಹಾಗೂ ೫೧ ಜನ ಪರಿಶಿಷ್ಟ ಪಂಗಡದವರಿಗೆ, ಸಮುದಾಯ ಹಕ್ಕು ಕಾಯ್ದೆಯಡಿ ಕಿರು ಅರಣ್ಯ ಸಂಗ್ರಹಕ್ಕಾಗಿ ಅನುಮೋದನೆ ದೊರೆಯಿತು.

೨೦೧೨ರಲ್ಲಿ ನಡೆದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ೪೫ ಸಮುದಾಯ ಸಂಪನ್ಮೂಲ ಅರ್ಜಿಗಳನ್ನು ಒಂದಕ್ಕಿಂತ ಹೆಚ್ಚು ಸಾಕ್ಷಿ ಕೋರಿ ಅನುಮೋದಿಸಲಾಗಿದೆ. ಈ ಪೈಕಿ ಮರು ಸರ್ವೆ ನಡೆಸಿ ಇಲ್ಲಿಯವರೆಗೆ ಮಡಿಕೇರಿ ತಾಲೂಕಿನ ೮ ಮತ್ತು ವಿರಾಜಪೇಟೆ ತಾಲೂಕಿನ ೮ ಒಟ್ಟು ೧೬ ಸಮುದಾಯ ಸಂಪನ್ಮೂಲ ಅರ್ಜಿಗಳಿಗೆ ಕಿರು ಅರಣ್ಯ ಸಂಗ್ರಹಕ್ಕಾಗಿ ಹಕ್ಕು ಪತ್ರ ವಿತರಿಸಲಾಗಿದೆ. ೨೯ ಅರ್ಜಿಗಳು ಹಕ್ಕುಪತ್ರ ವಿತರಿಸಲು ಬಾಕಿ ಇದ್ದು, ೮ ಅರ್ಜಿಗಳು ಮರು ಸರ್ವೆ ನಡೆಸಿ ಹಕ್ಕುಪತ್ರ ಸಹಿಗೆ ಸಲ್ಲಿಸಬೇಕಿದೆ. ಉಳಿದಂತೆ ೨೧ ಅರ್ಜಿಗಳು ಬಾಕಿ ಇವೆ ಎಂದು ಎಸ್.ಹೊನ್ನೇಗೌಡ ವಿವರಿಸಿದರು.

ಮರು ಪರಿಶೀಲನೆಗಾಗಿ ಬಾಕಿ ಇರುವ ಅರ್ಜಿಗಳು ನಾಲ್ಕೇರಿ ಗ್ರಾ.ಪಂ.ವ್ಯಾಪ್ತಿಯ ನಾಗರಹೊಳೆ ವ್ಯಾಪ್ತಿಯ ತುಂಡುಮುಂಡಗೆ ಕೊಲ್ಲಿ, ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ತಟ್ಟೆಕೆರೆ, ಕುಟ್ಟ ಗ್ರಾ.ಪಂ. ವ್ಯಾಪ್ತಿಯ ದೇವರಕಾಡು, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಅವರೆಗುಂದ ಈ ಹಾಡಿಗಳಲ್ಲಿ ಮರು ಪರಿಶೀಲನೆಗೆ ಬಾಕಿ ಇದ್ದು, ಕಾನೂನು ರೀತಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ ಇದುವರೆಗೆ ಪರಿಶಿಷ್ಟ ಪಂಗಡದವರು ೨೮೪೭ ಅರ್ಜಿಗಳನ್ನು ಸಲ್ಲಿಸಿದ್ದು, ಇತರೆ ೧೩೭೩ ಜನರು ಅರ್ಜಿ ಸಲ್ಲಿಸಿದ್ದಾರೆ. ಹಾಗೂ ೫೭ ಮಂದಿ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಒಟ್ಟು ೪೨೭೭ ಅರ್ಜಿಗಳು ಸಲ್ಲಿಕೆಯಾಗಿದೆ. ಇದರಲ್ಲಿ ಪರಿಶಿಷ್ಟ ಪಂಗಡದ ೧೮೪೦ ಅರ್ಜಿಗಳಿಗೆ ಅನುಮೋದನೆಯಾಗಿದೆ. ಇತರೆ ಸಮಾಜದಲ್ಲಿ ೫೨೭ ಅರ್ಜಿಗಳು ಅನುಮೋದನೆಯಾಗಿದೆ. ಹಾಗೆಯೇ ಸಿಎಫ್‌ಆರ್ ನಡಿ ೪೫ ಅರ್ಜಿಗಳು ಅನುಮೋದನೆಯಾಗಿದ್ದು, ಒಟ್ಟು ೨೪೧೨ ಅರ್ಜಿಗಳು ಅನುಮೋದನೆಯಾಗಿದೆ. ಉಳಿದಂತೆ ೧೮೬೫ ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ನಾಗರಹೊಳೆ ಹುಲಿ ಯೋಜನಾ ವಿಭಾಗದ ನಿರ್ದೇಶಕರಾದ ಸೀಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅನನ್ಯ ಕುಮಾರ್, ಲಕ್ಷ್ಮೀಕಾಂತ್, ಭೂದಾಖಲೆಗಳ ಉಪ ನಿರ್ದೇಶಕರಾದ ನಾರಾಯಣ ಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.