ಜಿಲ್ಲೆ

ಜಿಲ್ಲಾಮಟ್ಟದ ಚುನಾವಣಾ ಗ್ರಾಮಸಭೆ : ಜಿಲ್ಲಾಧಿಕಾರಿಯಿಂದ ಉದ್ಘಾಟನೆ : ಪರಿಷ್ಕೃತ ಮತದಾರರ ಪಟ್ಟಿ ಸಿದ್ಧ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಜಿಲ್ಲೆಯ 983 ಮತಗಟ್ಟೆಗಳಲ್ಲಿ ಚುನಾವಣಾ ಗ್ರಾಮಸಭೆ ನಡೆಯಿತು. ರಾಜಕೀಯ ಪಕ್ಷದ ಏಜೆಂಟರು, ಮತದಾರರ ಮುಂದೆ ಬೂತ್‌ಮಟ್ಟದ ಅಧಿಕಾರಿ ಮತದಾರರ ಪಟ್ಟಿ ಓದಿ ಹೇಳಲಾಯಿತು. ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರು ಸೇರ್ಪಡೆಗೊಂಡಿರುವ ಬಗ್ಗೆ ಪರಾಮರ್ಶೆ ನಡೆಸಿ, ಅಂತಹ ಮತದಾರರ ಹೆಸರು ಪಟ್ಟಿಯಿಂದ ತೆಗೆದು ಹಾಕಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪರಿಷ್ಕೃತ ಮತದಾರರ ಪಟ್ಟಿ ಸಿದ್ಧಪಡಿಸಲಾಗುವುದು. ಚುನಾವಣಾ ಗ್ರಾಮ ಸಭೆ 2.0ರ ಜಿಲ್ಲಾಮಟ್ಟದ ಉದ್ಘಾಟನೆಯನ್ನು ಕಾಸರಗೋಡು ಕ್ಷೇತ್ರದ ಡಯಟ್ ಮಾಯಿಪ್ಪಾಡಿಯಲ್ಲಿ ಕಾರ್ಯನಿರ್ವಹಿಸುವ ಬೂತ್ ಸಂಖ್ಯೆ 18ರಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಇಂಬಾಶೇಖರ್ ನೆರವೇರಿಸಿದರು.

ಚುನಾವಣಾ ಉಪಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಬಿ.ಎಲ್.ಒ. ಸಿ. ಸಿಂಧು ಮತದಾರರ ಪಟ್ಟಿ ಓದಿ ಹೇಳಿದರು.

1291 ಮೃತರ ಹೆಸರು ಪತ್ತೆ

ಚುನಾವಣಾ ಗ್ರಾಮಸಭೆಯಲ್ಲಿ 5563 ಸಾವನ್ನಪ್ಪಿರುವ ಮತದಾರರನ್ನು ಗುರುತಿಸಲು ಸಾಧ್ಯವಾಗಿತ್ತು. 2324 ಬೂತ್‌ಮಟ್ಟದ ಏಜೆಂಟರು, 2724 ಮತದಾರರು ಸಭೆಯಲ್ಲಿ ಭಾಗವಹಿಸಿದ್ದರು. ಮಂಜೇಶ್ವರ ಕ್ಷೇತ್ರದಲ್ಲಿ ನಡೆದ ಗ್ರಾಮಸಭೆಯಲ್ಲಿ 423 ರಾಜಕೀಯ ಪಕ್ಷ ಪ್ರತಿನಿಧಿಗಳು, 384 ಸಾರ್ವಜನಿಕರು ಭಾಗವಹಿಸಿದ್ದರು. ಒಟ್ಟು 991 ಮೃತರ ಹೆಸರು ಪತ್ತೆ ಹಚ್ಚಲಾಗಿದೆ. ಕಾಸರಗೋಡು ಕ್ಷೇತ್ರದಲ್ಲಿ ನಡೆದ ಚುನಾವಣಾ ಗ್ರಾಮ ಸಭೆಯಲ್ಲಿ 416 ರಾಜಕೀಯ ಪಕ್ಷ ಪ್ರತಿನಿಧಿಗಳು, 371 ಮಂದಿ ಭಾಗವಹಿಸಿದ್ದರು. ಇಲ್ಲಿ ಒಟ್ಟು 1161 ಮೃತರ ಹೆಸರು ಪತ್ತೆಯಾಗಿವೆ. ಉದುಮ ಕ್ಷೇತ್ರದಲ್ಲಿ ನಡೆದ ಚುನಾವಣಾ ಗ್ರಾಮಸಭೆಯಲ್ಲಿ 508 ರಾಜಕೀಯ ಪಕ್ಷ ಪ್ರತಿನಿಧಿಗಳು, 771 ಮತದಾರರು ಭಾಗವಹಿಸಿದ್ದರು. ಇಲ್ಲಿಂದ ಒಟ್ಟು 1291 ಮೃತರ ಹೆಸರು ಪತ್ತೆಹಚ್ಚಲಾಗಿದೆ.