ಮಂಡ್ಯ: ಜಿಲ್ಲೆಯಲ್ಲಿ ಬಾಲಗರ್ಭಿಣಿಯರು ಸುಳ್ಳು ದಾಖಲೆಯನ್ನು ಪಡೆದು ಆಸ್ಪತ್ರೆಗೆ ಸಲ್ಲಿಸುತ್ತಿರುವ ಮಾಹಿತಿ ಹೊರಬಿದ್ದಿದೆ. ಮಾತ್ರವಲ್ಲದೆ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಬಾಲ್ಯವಿವಾಹ ಪ್ರಕರಣ ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ ಹಾಗೂ ಬಾಲಗರ್ಭಿಣಿಯರ ತಡೆಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಸಮನ್ವಯ ಹಾಗೂ ಪರಿಶೀಲನಾ ಸಭೆಯಲ್ಲಿ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿದೆ. ಅದರಂತೆ ಪ್ರಮುಖವಾಗಿ 18 ವರ್ಷದೊಳಗಿನ ಹೆಣ್ಣು ಮಕ್ಕಳು ತಮ್ಮ ಆಧಾರ್‌ಕಾರ್ಡ್‌ನಲ್ಲಿ ವಯಸ್ಸು ಬದಲಾಯಿಸಿಕೊಂಡು ಸುಳ್ಳು ದಾಖಲೆಗಳನ್ನು ಆಸ್ಪತ್ರೆಗೆ ನೀಡುತ್ತಿರುವುದು ಕೇಳಿಬರುತ್ತಿರುವ ಮಾಹಿತಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆಧಾರ್‌ಕಾರ್ಡ್‌ನಲ್ಲಿ ಸುಳ್ಳು ವಯಸ್ಸನ್ನು ಬದಲಾವಣೆ ಮಾಡುವುದು ಅಥವಾ ಸಹಕರಿಸುವವರು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಬಾಲ್ಯವಿವಾಹದ ಕಾರಣ ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರು ಹೆಚ್ಚಾಗಿದ್ದಾರೆ. ಜಿಲ್ಲೆಯಲ್ಲಿ ಶಾಲೆಬಿಟ್ಟ ಹೆಣ್ಣು ಮಕ್ಕಳ ಸಂಖ್ಯೆಯನ್ನು ಪಟ್ಟಿಮಾಡಿ ಹಾಗೂ 15 ದಿನಗಳಿಗಿಂತ ಹೆಚ್ಚು ಸತತವಾಗಿ ಶಾಲೆಗೆ ಗೈರಾಗುವ ಹೆಣ್ಣು ಮಕ್ಕಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಬಿಇಒಗಳಿಗೆ ಸೂಚಿಸಿದ ಡಿಸಿ, ಬಾಲ್ಯವಿವಾಹ ತಡೆಗಟ್ಟಲು ಪ್ರತಿ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡಂತೆ ಸಮನ್ವಯ ಸಮಿತಿಯನ್ನು ಈ ಹಿಂದೆಯೇ ರಚಿಸಲಾಗಿದೆ. ಬಾಲ್ಯ ವಿವಾಹ, ಬಾಲ ಗರ್ಭಿಣಿ ಹಾಗೂ ಹೆಣ್ಣು ಭ್ರೂಣ ಪತ್ತೆಯ ವಿಚಾರಗಳ ಬಗ್ಗೆ ಪ್ರತಿ 2 ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು. ಜಿಲ್ಲೆಯಲ್ಲಿ ಒಟ್ಟು 60 ಬಾಲ್ಯ ವಿವಾಹ ಕುರಿತು ಬಂದ ದೂರುಗಳಲ್ಲಿ 46 ಬಾಲ್ಯವಿವಾಹವನ್ನು ತಡೆಯಲಾಗಿದೆ. 14 ಪ್ರಕರಣದ ಎ್ಐಆರ್ ದಾಖಲಿಸಲಾಗಿದೆ. ಆದಾಗ್ಯೂ ಬಾಲ್ಯ ವಿವಾಹ ಪ್ರಕರಣಗಳು ಜರುಗಿರುವುದು ತಲೆ ತಗ್ಗಿಸುವ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಯಾವುದೇ ಭ್ರೂಣ ಹತ್ಯೆ ಪ್ರಕರಣ ನಡೆಯದಂತೆ ನೋಡಿಕೊಳ್ಳಿ. ಸ್ಕ್ಯಾನಿಂಗ್ ಸೆಂಟರ್ ಮೇಲೆ ತೀವ್ರ ನಿಗಾ ಇಟ್ಟು ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಕೆಲ ಪಾಲಕರು ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಬೇಕು ಎನ್ನುವ ಭಾವನೆ, ಶಿಕ್ಷಣದ ಕೊರತೆ, ಮೂಢನಂಬಿಕೆಗಳಿಂದ ಬಾಲ್ಯವಿವಾಹಕ್ಕೆ ಮುಂದಾಗುತ್ತಾರೆ. ಕೆಲ ಪ್ರೇಮ ಪ್ರಕರಣಗಳ ಕಾರಣದಿಂದಲೂ ಬಾಲಗರ್ಭಿಣಿಯರು ಸೃಷ್ಟಿಯಾಗುತ್ತಾರೆ. ಕಾರಣ ಯಾವುದೇ ಇರಲಿ 18 ವರ್ಷ ತುಂಬುವುದಕ್ಕೆ ಮೊದಲು ಗರ್ಭಿಣಿ ಆಗುವ ಬಾಲಕಿಯರು ಹಲವು ದೈಹಿಕ, ಮಾನಸಿಕ ಸಂಕಷ್ಟ ಅನುಭವಿಸುತ್ತಾರೆ ಎಂದು ಹೆಣ್ಣು ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.
ಬಾಲಗರ್ಭಿಣಿಯರಿಗೆ ರಕ್ತಹೀನತೆ, ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ, ಕಡಿಮೆ ಜನನ ತೂಕ, ಶಿಶು ಮರಣದ ಹೆಚ್ಚಿನ ಪ್ರಮಾಣ, ಖಿನ್ನತೆ, ಪ್ರಿ-ಎಕ್ಲಾಂಪ್ಸಿಯಾ, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನವಜಾತ ಶಿಶುವಿನ ಸಾವು ಸಂಭವಿಸುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆ ಅವರು ಸಹ ಜಾಗೃತಿ ಮೂಡಿಸಿ. ಬಾಲ ತಾಯಂದಿರ ಪ್ರಕರಣಗಳಲ್ಲಿ ದೂರುಗಳು ಬಂದಾಗ ಕ್ರಮ ಕೈಗೊಳ್ಳಬೇಕು. ಶಾಲೆ ಮುಖ್ಯಸ್ಥರು, ವಸತಿ ನಿಲಯಗಳ ಮೇಲ್ವಿಚಾರಕರು, ದೇವಸ್ಥಾನದ ಮುಖ್ಯಸ್ಥರು, ಮುದ್ರಣಾಲಯದ ಮಾಲೀಕರಿಗೆ, ಕಲ್ಯಾಣ ಮಂಟಪಗಳ ವ್ಯವಸ್ಥಾಪಕರು, ಸಾಮೂಹಿಕ ವಿವಾಹಗಳ ಆಯೋಜಕರು, ಧಾರ್ಮಿಕ ಮುಖಂಡರಿಗೆ ಬಾಲ್ಯ ವಿವಾಹ ತಡೆಗಟ್ಟಲು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಸಭೆ ಕರೆದು ತಿಳಿಸಿ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ ಮಾತನಾಡಿ, 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಪಿಯುಸಿಗೆ ಪ್ರವೇಶ ಪಡೆಯದೆ ಇರುವ ವಿದ್ಯಾರ್ಥಿಗಳ ಬಗ್ಗೆ ವಿಚಾರಿಸಿ. ಮುಖ್ಯವಾಗಿ ಹೆಣ್ಣು ಮಕ್ಕಳ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸಬೇಕು. ಈಗಾಗಲೇ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇನ್ನೂ ಹೆಚ್ಚಾಗಿ ಬಲವರ್ಧನೆಯಾಗಬೇಕು ಎಂದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಗಂಗಾಧರಸ್ವಾಮಿ, ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ಎಸ್.ರಾಜಮೂರ್ತಿ, ಆರ್‌ಸಿಎಚ್‌ಒ ಅಧಿಕಾರಿ ಡಾ.ಅನಿಲ್ ಕುಮಾರ್, ಡಿಡಿಪಿಐ ಎಚ್.ಶಿವರಾಮೇಗೌಡ, ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್ ಇತರರಿದ್ದರು.