ಜಿಲ್ಲೆ

ಜಿಲ್ಲೆಯ ನಾಲ್ಕು ಗ್ರಾಮಗಳು ತಂಬಾಕಿನಿಂದ ಮುಕ್ತ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಮಂಡ್ಯ: ಜಿಲ್ಲೆಯಲ್ಲಿ ಚಿಕ್ಕನೇರಳೆ, ಚಾಗಶೆಟ್ಟಿಹಳ್ಳಿ, ಮೇಲುಕೋಟೆ, ನಗುವಿನಹಳ್ಳಿ ತಂಬಾಕು ಮುಕ್ತ ಗ್ರಾಮಗಳಾಗಿವೆ. ಇನ್ನೂ ಹೆಚ್ಚಿನ ಗ್ರಾಮಗಳು ತಂಬಾಕು ಮುಕ್ತ ಪ್ರದೇಶಗಳಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಂಬಾಕು ನಿಯಂತ್ರಣ ಕೋಶದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ತಂಬಾಕು ಸಿಗದಂತೆ ಮಾಡುವುದು ಅಷ್ಟೇ ಮುಖ್ಯ ಎಂದು ಹೇಳಿದರು.

ಶಾಲಾ ಕಾಲೇಜುಗಳಿಂದ 100 ಮೀಟರ್ ಅಂತರ ತಂಬಾಕು ಮುಕ್ತ ಪ್ರದೇಶವಾಗಬೇಕು. ಇದನ್ನು ಖುದ್ದಾಗಿ ಶಿಕ್ಷಣ ಇಲಾಖೆ ಪರಿಶೀಲಿಸಿ ದೃಢೀಕರಣ ಪತ್ರ ನೀಡಬೇಕು. ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಕಂಡುಬಂದಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕಾನೂನು ಕ್ರಮ ಜರುಗಿಸಬೇಕು. ದಾಳಿ ನಡೆಸಿದ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿ ತಂಬಾಕು ಮಾರಾಟ ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸುವುದರ ಜತೆಗೆ ಅಂಗಡಿ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಿಗೆ ಪರವಾನಗಿ ರದ್ದು ಮಾಡುವಂತೆ ತಿಳಿಸಿ. ತಂಬಾಕು ಮತ್ತು ಮದ್ಯವ್ಯಸನಿಗಳಿಗೆ ವ್ಯಸನ ಮುಕ್ತ ಮಾಡಲು ಧರ್ಮಸ್ಥಳ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಒಂದು ಕೇಂದ್ರ ತೆರೆಯುವುದು ಉತ್ತಮ. ಇದಕ್ಕೆ ಪ್ರಸ್ತಾವನೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ತಂಬಾಕು ಮುಕ್ತ ಮಂಡ್ಯ ನಮ್ಮ ಸಂಕಲ್ಪವಾಗಲಿ. ಶಾಲಾ ಕಾಲೇಜುಗಳಲ್ಲಿ ತಂಬಾಕು ವ್ಯಸನ ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳುವ ಕಾರ್ಯ ಚುರುಕುಗೊಳಿಸಿ. ತಾಲೂಕು ಹಾಗೂ ಗ್ರಾಮ ಮಟ್ಟಗಳಲ್ಲಿ ಸಾರ್ವಜನಿಕರಿಗೆ ತಂಬಾಕು ವ್ಯಸವಗಳ ಬಗ್ಗೆ ಜಾಗೃತಿ ಮೂಡಿಸಿ. ಆರೋಗ್ಯದ ಮೇಲೆ ತಂಬಾಕಿನಿಂದ ಬೀರುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಅರಿವು ಮೂಡಿಸುವ ಕೆಲಸ ಹೆಚ್ಚಲಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಡಿಡಿಪಿಐ ಶಿವರಾಮೇಗೌಡ, ನಗರಸಭೆ ಆಯುಕ್ತ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಡಾ.ಅನಿಲ್ಕುಮಾರ್ ಇತರರಿದ್ದರು.