ಜಿಲ್ಲೆ

ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಹದಿಹರೆಯದ ಮಕ್ಕಳು ಮಾನಸಿಕ ಸ್ಥಿರತೆ ಕಳೆದುಕೊಂಡು ಸಣ್ಣಪುಟ್ಟ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮಾನಸಿಕ ಸ್ಥಿರತೆ ಕಾಪಾಡಲು ಶೈಕ್ಷಣಿಕ ಸಂಸ್ಥೆಗಳಲ್ಲಿ ಆಪ್ತ ಸಮಾಲೋಚನಾ ಕೊಠಡಿ ಸ್ಥಾಪಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಮಾನಸಿಕ ಸ್ಥಿರತೆ ಮತ್ತು ದೈಹಿಕ ಯೋಗಕ್ಷೇಮ ಮೇಲ್ವಿಚಾರಣೆಯ ಸಂಬಂಧ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ಶಾಲೆಯಲ್ಲಿ ಒಬ್ಬ ಶಿಕ್ಷಕರಿಗೆ ಮಾನಸಿಕ ಒತ್ತಡ ನಿವಾರಣೆಯ ಕುರಿತು ಮನೋವೈದ್ಯ ತಜ್ಞರಿಂದ ವಿಶೇಷ ತರಬೇತಿ ಕೊಡಿಸಬೇಕು. ತರಬೇತಿ ಪಡೆದ ಶಿಕ್ಷಕರು ಶಾಲೆಯಲ್ಲಿ ದುರ್ಬಲ ಮನಸ್ಥಿತಿ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಾರಕ್ಕೆ ಒಂದು ದಿನ ವಿಶೇಷ ಆಪ್ತ ಸಮಾಲೋಚನಾ ನಡೆಸಲಿ. ಶಾಲಾ ಕಾಲೇಜುಗಳು ಇದರ ಕುರಿತಾಗಿ ಹೆಚ್ಚಿನ ನಿಗಾ ವಹಿಸಿದರೆ ಮಕ್ಕಳ ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.

ಆಸ್ಪತ್ರೆಗಿಂತ ಶಾಲೆ ದೊಡ್ಡದು. ಆದ್ದರಿಂದ ಎಲ್ಲ ತಾಲೂಕು ಮಟ್ಟದಲ್ಲಿ ಮಕ್ಕಳ ಮೇಲ್ವಿಚಾರಣೆ ಸಮಿತಿಯನ್ನು ರಚಿಸಿ. ಆತ್ಮಹತ್ಯೆಗೆ ಯತ್ನಿಸುವ ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸಿ. ಎಲ್ಲ ಕೆಲಸಕ್ಕಿಂತ ಶ್ರೇಷ್ಠ ಕೆಲಸ ಜೀವ ಉಳಿಸುವುದು. ಹದಿಹರೆಯದ ಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕ ಒತ್ತಡಕ್ಕೆ ಸಿಲುಕಿರುತ್ತಾರೆ. ಅಂತಹವರನ್ನು ಗುರುತಿಸಿ ಸೂಕ್ತ ತಿಳಿವಳಿಕೆ ಮತ್ತು ಅವರ ಮನಪರಿರ್ವತನೆ ಮಾಡುವ ಕೆಲಸವನ್ನು ತರಬೇತಿ ಪಡೆದ ಶಿಕ್ಷಕರು ಮಾಡಬೇಕು ಎಂದರು.

ಕೇವಲ ಶಾಲಾ ಕಾಲೇಜು ಅಲ್ಲದೆ ವಿದ್ಯಾರ್ಥಿ ನಿಲಯಗಳಲ್ಲೂ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ಆಗದೆ ಕೆಲವು ಮಕ್ಕಳು ವಿಚಲಿತರಾಗಿರುತ್ತಾರೆ. ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳು ಸಹ ಅಂತಹ ಮಕ್ಕಳ ಕುರಿತು ಕಾಳಜಿ ವಹಿಸಬೇಕು. ಅಗತ್ಯವಿದ್ದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಮಾಡಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡು ಕಳದೆ ಎರಡು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಮಾಹಿತಿಯನ್ನು ಸಂಗ್ರಹಣೆ ಮಾಡಿ. ನಂತರ ಅವುಗಳನ್ನು ಅವಲೋಕಿಸಿ. ಆತ್ಮಹತ್ಯೆಗೆ ಯತ್ನಿಸಿದ ಹಾಗೂ ದುರ್ಬಲ ಮನಸ್ಥಿತಿ ಹೊಂದಿರುವ ಮಕ್ಕಳ ಮಾಹಿತಿಯನ್ನು ನಿರ್ವಹಣೆ ಮಾಡಿ. ಅವರ ಪಾಲಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿ. ಸಾಧ್ಯವಾದಷ್ಟು ಶೈಕ್ಷಣಿಕ ಸಂಸ್ಥೆಗಳು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಿಸಿ. ಇದರಿಂದ ಮಕ್ಕಳಲ್ಲಿನ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಪ್ರತಿ ತಿಂಗಳು ಮಕ್ಕಳ ಮೇಲ್ವಿಚಾರಣೆ ಸಮಿತಿ ಸಭೆಯನ್ನು ಕರೆದು ಮಕ್ಕಳ ಮಾನಸಿಕ ಸ್ಥಿರತೆ ಕಾಪಾಡಲು ತೆಗೆದುಕೊಂಡ ಕ್ರಮಗಳ ಮಾಹಿತಿ ಹಾಗೂ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಶಾಲಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.