ಜಿಲ್ಲೆ

ಸಮಾನತೆ ಬದುಕಿಗಾಗಿ ಹೋರಾಟ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಮಂಡ್ಯ: ದೇಶದಲ್ಲಿ ಸಮಾನತೆ ಬದುಕಿಗಾಗಿ ಹೋರಾಟ ನಡೆದಿದೆ. ಈ ನಿಟ್ಟಿನಲ್ಲಿ ಮಹನೀಯರು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಆದರೆ, ಸಮಾನತೆಯ ಹೋರಾಟದಲ್ಲಿ ಎಂದೂ ಗುರುತಿಸಿಕೊಂಡಿರದವರು ಜಾತ್ಯತೀತ ವ್ಯವಸ್ಥೆ, ಸಮಾನತೆ ಪ್ರತಿಪಾದಿಸುವವರು, ಬುದ್ಧಿಜೀವಿಗಳು ಹಾಗೂ ಶೋಷಿತರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಸದಾಕಾಲ ಟೀಕಿಸುತ್ತ ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಬುದ್ಧಿಸ್ಟ್ ಒಕ್ಕೂಟ, ಮಾನವ ಬಂಧುತ್ವ ವೇದಿಕೆ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಜನರು ಇತಿಹಾಸ ಅರಿಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಈಗಲೇ ಎಚ್ಚೆತ್ತು ಇತಿಹಾಸವನ್ನು ಅರಿಯಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಪಿಡುಗಾಗಿದ್ದ ಅಸ್ಪೃಶ್ಯತೆ ಸಂಪೂರ್ಣವಾಗಿ ನಿರ್ಮೂಲನೆಯಾಗದಿದ್ದರೂ, ಅದರ ಪರಿಣಾಮ ತಗ್ಗಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ಪ್ರಮುಖ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಹೊಸ ಬೆಳವಣಿಗೆಯೊಂದಿಗೆ ಹೊಸ ಹೆಜ್ಜೆ ಕಾಣುತ್ತಿದ್ದೇನೆ. ಬದಲಾವಣೆ ಅವಶ್ಯಕ, ಆ ನಿಟ್ಟಿನಲ್ಲಿ ನೀವೆಲ್ಲರೂ ಮುನ್ನಡೆಯುತ್ತಿದ್ದೀರಿ. ನಾನು ಇಷ್ಟರ ಮಟ್ಟಿಗಿನ ಬದಲಾವಣೆ ನಿರೀಕ್ಷಿಸಿರಲಿಲ್ಲ. ಆದರೆ ಇಲ್ಲಿ ನೋಡಿದರೆ ಇಷ್ಟೊಂದು ಪ್ರಮಾಣದಲ್ಲಿ ಸಂಘಟನೆಯಾಗಿ ಸಮ್ಮೇಳನದಲ್ಲಿ ಒಗ್ಗೂಡಿರುವುದು ಸಂತಸದ ವಿಚಾರ. ದೇಶದ ಇತಿಹಾಸ, ಸಂವಿಧಾನ, ಜನರ ಹಿತ ಕಾಪಾಡುವ ಕಾಳಜಿ ಹೊಂದಿಲ್ಲದಿದ್ದರೆ ನನ್ನನ್ನು ಸಹ ಟೀಕಿಸಿ, ಯಾರೇ ತಪ್ಪು ಮಾಡಿದರೂ ತಪ್ಪೇ. ತಪ್ಪನ್ನು ಸಹಿಸಿಕೊಳ್ಳುವುದು ಸಹ ಅಪರಾಧ. ಇದರಲ್ಲಿ ಪಕ್ಷ, ವ್ಯಕ್ತಿ ಮುಖ್ಯವಲ್ಲ. ತಪ್ಪನ್ನು ಸರಿಪಡಿಸುವ ಕೆಲಸವಾಗಬೇಕು, ಆ ನಿಟ್ಟಿನಲ್ಲಿ ಜನತೆ ಮುನ್ನಡೆಯಬೇಕು ಎಂದು ಹೇಳಿದರು.

ಬೌದ್ಧ ಧರ್ಮ ಎಲ್ಲ ಧರ್ಮಗಳಿಗಿಂತಲೂ ವಿಭಿನ್ನವಾದ ಧರ್ಮ. ಇದು ಯಾವುದೇ ಜಾತಿಗೆ ಅಂಟಿಕೊಂಡಿಲ್ಲ, ಸೀಮಿತವಾಗಿಯೂ ಇಲ್ಲ. ಯಾರು ಬೇಕಾದರೂ ಈ ಧರ್ಮವನ್ನು ಸ್ವೀಕಾರ ಮಾಡಬಹುದು. ವಿಶ್ವಕ್ಕೇ ಮಾದರಿಯಾಗುವಂತಹ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಕೂಡ ಹಿಂದು ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ದ್ವೇಷ, ಅಸೂಯೆಯನ್ನು ಬಿಟ್ಟು ಎಲ್ಲರನ್ನೂ ಪ್ರೀತಿಸುವ ಧರ್ಮ ಶ್ರೇಷ್ಠ ಧರ್ಮ. ನಮ್ಮ ಕಾರ್ಯಚಟುವಟಿಕೆಗಳು ನಿಸ್ವಾರ್ಥದಿಂದ ಇರಬೇಕು. ಸಮಾಜಕ್ಕೆ ಕೆಟ್ಟದ್ದನ್ನು ಮಾಡುವ ಮನಸು ಇರಬಾರದು ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆರನೇ ಶತಮಾನದಲ್ಲಿ ಜನ್ಮ ತಾಳಿದ ಬೌದ್ಧ ಧರ್ಮ ಭಾರತದಲ್ಲಿ ಬಹಳ ಎತ್ತರಕ್ಕೆ ಬೆಳೆಯಬೇಕಿತ್ತು. ಮನೆ ಮನೆಯನ್ನು ತಲುಪಬೇಕಿತ್ತು. ಆದರೆ, ಆ ಧರ್ಮ ನಿರೀಕ್ಷೆಯಂತೆ ಬೆಳವಣಿಗೆ ಕಾಣಲೇ ಇಲ್ಲ. ದೇಶದಲ್ಲಿ ಶೋಷಣೆ ವಿರುದ್ಧ ಹೋರಾಡುವ ಧರ್ಮ, ಸಂಘಟನೆಗಳನ್ನು ಮಟ್ಟಹಾಕುವ ಪ್ರಯತ್ನಗಳು ನಡೆದವು. ಬುದ್ಧನ ನಂತರ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹುಟ್ಟುಹಾಕಿದ ಲಿಂಗಾಯತ ಧರ್ಮವನ್ನೂ ಬೆಳೆಯಲು ಬಿಡಲಿಲ್ಲ. ಅದು ಕೂಡ ಒಂದು ಜಾತಿಗೆ ಸೀಮಿತವಾಗಿ ಉಳಿದುಕೊಂಡಿದೆ ಎಂದು ಹೇಳಿದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಸಹಬಾಳ್ವೆ, ಶಾಂತಿಯನ್ನು ನಾವೂ ಬೆಳೆಸಿಕೊಳ್ಳಬೇಕು. ಅಂಬೇಡ್ಕರ್ ಹಿಂದು ಆಗಿ ಹುಟ್ಟಿ ಬೌದ್ಧ ಧರ್ಮ ಸ್ವೀಕರಿಸಿದರು. ಭಾರತ ಸೇರಿದಂತೆ ಪ್ರಪಂಚದ 26 ದೇಶಗಳಲ್ಲಿ ಬೌದ್ಧ ಧರ್ಮ ಬೆಳೆಯುತ್ತಿದೆ. ನಾವೆಲ್ಲರೂ ಸಂವಿಧಾನದ ಪರ ಇರಬೇಕು. ಸಂವಿಧಾನ ತಿದ್ದುತ್ತೇವೆ, ಬದಲಿಸುತ್ತೇವೆ ಎನ್ನುವವರಿಗೆ ಬುದ್ಧಿ ಕಲಿಸಿ ಮನೆಗೆ ಕಳುಹಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಕೆ.ಆರ್.ನಂದಿನಿ, ಚನ್ನಲಿಂಗನಹಳ್ಳಿ ಬೌದ್ಧಬಿಕ್ಕು ಚೇತವನದ ಮನೋರಖ್ಖಿತ ಬಂತೇಜಿ, ಬುದ್ದಿಸ್ಟ್ ಒಕ್ಕೂದ ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ಸುನಂದಾ ಜಯರಾಂ, ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಇತರರಿದ್ದರು.