ಹಾಸನ: ಕಲಿಕೆ ಮತ್ತು ಗಳಿಕೆಯೊಂದಿಗೆ ಜೀವನ ರೂಪಿಸಿಕೊಳ್ಳಲು ಶಿಶಿಕ್ಷು ಮೇಳಗಳು ಅತ್ಯಂತ ಪರಿಣಾಮಕಾರಿಯಾಗಿವೆ ಎಂದು ಪ್ರಭಾರಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಬಿ.ಎ.ಕೃಷ್ಣೇಗೌಡ ತಿಳಿಸದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಪ್ರೆಂಟಿಷಿಪ್ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಅಪ್ರೆಂಟಿಷಿಪ್ ಅಂದರೆ ಯಾವುದೇ ವೃತ್ತಿಗೆ ಪಡೆಯುವ ತರಬೇತಿ. ಕೈಗಾರಿಕೆಗಳಲ್ಲಿ ಅಥವಾ ಇನ್ನಿತರೆ ಕ್ಷೇತ್ರಗಳಲ್ಲಿ ತರಬೇತಿಯಲ್ಲಿ ಉತ್ತಮ ಸಾಮರ್ಥ್ಯ ಪಡೆದು ಬದುಕಿಗೆ ದಾರಿ ಕಂಡುಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಪ್ರದೀಪ್ ಮಾತನಾಡಿ, ಐಐಟಿ, ಡಿಪ್ಲೊಮಾ ಮತ್ತಿತರ ವೃತ್ತಿ ತರಬೇತಿ ಪಡೆದವರು ಎರಡು- ಮೂರು ವರ್ಷ ಉದ್ಯೋಗಕ್ಕಾಗಿ ಕಾಯುತ್ತ ಕುಳಿತುಕೊಂಡು ಸಮಯ ವ್ಯರ್ಥ ಮಾಡಬಾರದು. ಬದಲಿಗೆ ಇಂತಹ ಶಿಶಿಕ್ಷು ಮೇಳಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ಕೌಶಲ್ಯ ಪಡೆದುಕೊಳ್ಳಬಹುದು. ಉತ್ತಮ ಅಭ್ಯರ್ಥಿಗಳಿಗೆ ರಾಜ್ಯದಲ್ಲಿ ಉದ್ಯೋಗ ದೊರೆಯುವಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು.
ತಮಿಳುನಾಡು ಕೈಗಾರಿಕಾ ಕಾರಿಡಾರ್‌ಗೆ ಪೂರಕವಾಗಿ ಹತ್ತಿರದ ತುಮಕೂರಿನಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಬರಲಿವೆ. ಅದಲ್ಲದೆ ಇಸ್ರೇಲ್ ವೈಜ್ಞಾನಿಕ ಕೃಷಿ ಮಾದರಿಯು ರಾಜ್ಯದಲ್ಲಿ ಪರಿಚಯವಾಗುತ್ತಿರುವುದರಿಂದ ಇಲ್ಲಿಯೂ ಕೂಡ ಕೌಶಲಯುಕ್ತ ಅಭ್ಯರ್ಥಿಗಳಿಗೆ ಬೇಡಿಕೆ ಬರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ದೊಂಡಪ್ಪನಾವಿ, ಸಂಸ್ಥೆಯ ಉದ್ಯೋಗ ನಿಯುಕ್ತಿ ಅಧಿಕಾರಿ ಪರಮೇಶ್, ನೌಕರ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್, ತರಬೇತುದಾರ ಮಹೇಂದ್ರ, ದೀಪಾ, ಬಾಗೂರು ತರಬೇತಿ ಸಂಸ್ಥೆಯ ಪ್ರಾಂಶುಪಾಲ ರಮೇಶ, ಚನ್ನರಾಯಪಟ್ಟಣ ತರಬೇತಿ ಸಂಸ್ಥೆ ಪಾಂಶುಪಾಲ ಅರುಣ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕ ಮಂಜುನಾಥ, ಗುರುಸ್ವಾಮಿ, ಕೌಶಲಾಭಿವೃದ್ಧಿ ಕಚೇರಿ ಸಹಾಯಕ ಸಾಂಖ್ಯಿಕ ಅಧಿಕಾರಿ ಪೂರ್ಣೇಶ್ ಇತರರು ಇದ್ದರು.