ಜಿಲ್ಲೆ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟಗಾರರ ಸಂಘದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶ

ಮೈಸೂರು: ಕೃಷಿ ಸಂಬಂಧಿಸಿ ಯಾವುದೇ ಹೊಸ ತಂತ್ರಜ್ಞಾನದ ಮಾಹಿತಿಯನ್ನು ಕೃಷಿಕರಿಗೆ ತಲುಪಿಸುವುದು ಕೃಷಿ ಪರಿಕರ ಮಾರಾಟಗಾರರ ಕರ್ತವ್ಯ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಹೇಳಿದರು.

ನಗರದ ಇಸ್ಕಾನ್‌ನ ಶ್ರೀಧಾಮ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಮಾರಾಟಗಾರರ ಸಂಘದ ಜಿಲ್ಲಾ ಮಟ್ಟದ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ತಂತ್ರಜ್ಞಾನ ಮುಂದುವರಿದಷ್ಟು ಕೃಷಿಕರು ಹಾಗೂ ಕೃಷಿ ಪರಿಕರ ಮಾರಾಟಗಾರರಿಗೆ ಅನುಕೂಲ. ಆದ್ದರಿಂದ ಕೃಷಿ ಸಂಬಂಧಿಸಿದ ಹೊಸ ತಂತ್ರಜ್ಞಾನ ಮಾಹಿತಿಯನ್ನು ಕೃಷಿ ಪರಿಕರ ಮಾರಾಟಗಾರರು ಕೃಷಿಕರಿಗೆ ಪ್ರತಿ ತಾಲೂಕು ಮಟ್ಟದಲ್ಲಿ ತಲುಪಿಸುವ ಕೆಲಸ ಮಾಡಬೇಕು. ಹೊಸ ಕೀಟನಾಶಕ, ರಸಗೊಬ್ಬರವನ್ನು ಯಾವ ಪ್ರಮಾಣದಲ್ಲಿ ಬಳಸಬೇಕು ಎಂಬುದನ್ನು ಮೊದಲು ತಾವು ತಿಳಿದುಕೊಂಡು ನಂತರ ಕೃಷಿಕರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

ಮಾರುಕಟ್ಟೆಗೆ ಬರುವ ಕೀಟನಾಶಕಗಳನ್ನು ಶಿಫಾರಸು ಮಾಡುವ ಅಧಿಕಾರ ಅಧಿಕಾರಿಗಳಿಗೆ ಇಲ್ಲ. ಮಾರಾಟಗಾರರು ಶಿಫಾರಸು ಮಾಡುವ ಉತ್ಪನ್ನಗಳನ್ನು ರೈತರು ಬಳಸುತ್ತಾರೆ. ನಂತರ ಅದರ ಪ್ರಯೋಜನಗಳ ಕುರಿತು ಸಲಹೆ ಪಡೆಯಬೇಕು. ಆ ಮೂಲಕ ಉತ್ಪನ್ನದ ಮೌಲ್ಯಮಾಪನ ಮಾಡಬೇಕು. ಯಶಸ್ವಿ ರೈತರನ್ನು ಮಾತನಾಡಿಸಬೇಕು ಎಂದರು. ಸದ್ಯ ಪರಿಸ್ಥಿತಿಯಲ್ಲಿ ಕೃಷಿಕರ ಸಂಖ್ಯೆಗೆ ಹೋಲಿಸಿದರೆ ಪರಿಕರ ಮಾರಾಟಗಾರರ ಸಂಖ್ಯೆ ಕಡಿಮೆ ಇದೆ ಎಂದರು.

ಸಂಘದ ಅಧ್ಯಕ್ಷ ಬಿ.ಪಿ.ಶಿವಪ್ರಕಾಶ್ ಮಾತನಾಡಿ, ಸದ್ಯಕ್ಕೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಿಗೆ ಮಾತ್ರ ಪರವಾನಗಿಗಳಲ್ಲಿ ದಾಸ್ತಾನು ಮಳಿಗೆಯನ್ನು ಸೇರಿಸಲು ಅವಕಾಶವಿದೆ. ಅದೇ ರೀತಿ ಕ್ರಿಮಿನಾಶಕಗಳ ಪರವಾನಗಿಯಲ್ಲೂ ಸಹ ದಾಸ್ತಾನು ಮಳಿಗೆಯನ್ನು ಸೇರಿಸಲು ಅವಕಾಶ ಕೊಡಬೇಕು. ಪ್ರತೀ ಪರವಾನಿಗೆಗೂ ಅರ್ಹ ವ್ಯಕ್ತಿ ಅವಶ್ಯಕತೆ ಇದ್ದು, ಅದನ್ನು ಪಾಲನೆ ಮಾಡುತ್ತಿದ್ದೇವೆ. ಆದರೆ, ದಾಸ್ತಾನು ಮಳಿಗೆಗೂ ವಿದ್ಯಾರ್ಹತೆ ಕೇಳುತ್ತಿದ್ದಾರೆ. ಆದ್ದರಿಂದ ದಾಸ್ತಾನು ಮಳಿಗೆಗಳಿಗೆ ಪ್ರತ್ಯೇಕ ಪರವಾನಗಿಯಿಂದ ವಿನಾಯಿತಿ ಕೊಡಬೇಕು. ಪಿಓಎಸ್ ಮಿಷನ್ ಮೂಲಕ ರೈತರಿಗೆ ಬಿಲ್ ನೀಡುವಾಗ ಅನೇಕ ತಾಂತ್ರಿಕ ತೊಂದರೆಗಳಾಗುತ್ತಿದ್ದು, ಅದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಚಾಮರಾಜನಗರ ಜಂಟಿ ಕೃಷಿ ನಿರ್ದೇಶಕ ಡಾ.ಎಸ್.ಎಸ್.ಆಬೀದ್, ಜಾಗೃತ ಕೋಶ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಧುಸೂದನ್, ತೋಟಗಾರಿಕೆ ಉಪ ನಿರ್ದೇಶಕ ರುದ್ರೇಶ್, ಸಂಘದ ಗೌರವ ಅಧ್ಯಕ್ಷ ನಂಜಪ್ಪ, ಕಾರ್ಯದರ್ಶಿ ಸತೀಶ್ ಇದ್ದರು.