ಮಂಡ್ಯ: ಜಿಲ್ಲೆಯಲ್ಲಿ1,40, 624 ಮಕ್ಕಳಿಗೆ ಆಧಾರ್ ನವೀಕರಣ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಶಾಲಾವಾರು ಪಟ್ಟಿ ಸಿದ್ಧಪಡಿಸಿ ಆಯಾ ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುತುವರ್ಜಿ ವಹಿಸಿ ಶಾಲೆಗಳ ಮುಖ್ಯ ಶಿಕ್ಷಕರು ನವೀಕರಣಗೊಳ್ಳದ ಮಕ್ಕಳ ಬಯೋಮೆಟ್ರಿಕ್ ನೀಡಿ ಆಧಾರ್ ನವೀಕರಣಕ್ಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಆಧಾರ್ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 5 ವರ್ಷದ ನಂತರ ಆಧಾರ್‌ನಲ್ಲಿ ಮಕ್ಕಳ ಬಯೋಮೆಟ್ರಿಕ್ ಪಡೆದುಕೊಳ್ಳುತ್ತಾರೆ. ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಎಲ್ಲ ಸೌಲಭ್ಯಗಳಿಗೆ ಆಧಾರ್ ಕಡ್ಡಾಯವಾಗಿದ್ದು, ಬಯೋಮೆಟ್ರಿಕ್ ನೀಡದ ಮಕ್ಕಳ ಆಧಾರ್ ನವೀಕರಣಕ್ಕೆ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಮಾನಸಿಕ ಅಸ್ವಸ್ಥರು ವೃದ್ಧರು ಸೇರಿದಂತೆ 18 ವರ್ಷ ಮೇಲ್ಪಟ್ಟ 800 ಕ್ಕೂ ಹೆಚ್ಚು ಜನ ಆಧಾರ್ ನಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಆಧಾರ್ ನಲ್ಲಿ ನೋಂದಣಿ ಆಗದವರ ಪಟ್ಟಿ ತೆಗೆದುಕೊಂಡು ಅವರಿಗೆ ದಾಖಲಾತಿಗಳನ್ನು ಸಿದ್ಧಪಡಿಸಿ 1 ತಿಂಗಳ ಒಳಗಾಗಿ ಆಧಾರ್ ನೊಂದಣಿ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 188 ಆಧಾರ್ ಸೇವಾ ಕೇಂದ್ರಗಳಿವೆ. ಆಯ್ದ ಅಂಚೆ ಕಚೇರಿ ಮತ್ತು ಬ್ಯಾಂಕ್ ಗಳಲ್ಲಿ ಸಹ ಆಧಾರ್ ನೋಂದಣಿ ಮತ್ತು ನವೀಕರಣ ನಡೆಯುತ್ತದೆ. ಕೇಂದ್ರದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಆಧಾರ್ ನವೀಕರಣ ಹಾಗೂ ಅವಶ್ಯಕತೆಯ ಬಗ್ಗೆ ಮಾಹಿತಿಯನ್ನು ಅನಾವರಣಗೊಳಿಸಬೇಕು. ಕರಪತ್ರ ಹಾಗೂ ಬ್ಯಾನರ್ ಅನಾವರಣಗೊಳಿಸಿ ಹೆಚ್ಚಿನ ಪ್ರಚಾರ ನೀಡಿ ಎಂದು ಸಲಹೆ ನೀಡಿದರು.
ಹತ್ತು ವರ್ಷದ ಹಿಂದೆ ಯಾವುದೇ ದಾಖಲಾತಿ ನೀಡದೆ ಆಧಾರ್ ಮಾಡಿಸಿಕೊಂಡಿರುವವರು ಇದ್ದರೆ, ಅಂತಹವರು ವಾಸಸ್ಥಳ ದೃಢೀಕರಣ ಪತ್ರವನ್ನು ನೀಡಿ ದಾಖಲೆಗಳನ್ನು ನವೀಕರಿಸಬೇಕು. ಇಲ್ಲದಿದ್ದರೆ ಆಧಾರ್ ಸಂಖ್ಯೆ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಇತರೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ದಾಖಲೆ ಸವೀಕರಣವನ್ನು ಸ್ವತಃ ತಾವೇ ತಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಮಾಡಬಹುದು ಅಥವಾ ಆಧಾರ್ ಸೇವಾ ಕೇಂದ್ರದಲ್ಲಿ 50 ರೂ ಪಾವತಿಸಿ ದಾಖಲೆಗಳನ್ನು ನವೀಕರಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1,18,539 ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಕೊಂಡಿರುವುದಿಲ್ಲ. ಅನಕ್ಷರಸ್ಥರು ಹಾಗೂ ಗ್ರಾಮೀಣ ಭಾಗದ ಕೆಲವರಿಗೆ ವಿಳಾಸ ಮತ್ತು ಮೊಬೈಲ್ ನಂಬರ್ ಅಪ್ ಡೇಟ್ ಮಾಡಿಸುವುದು ತಿಳಿಯುವುದಿಲ್ಲ. ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳು ಇದರ ಬಗ್ಗೆ ಜನರಿಗೆ ಅರಿವು ಮೂಡಿಸಿ. ಆಶಾ ಕಾರ್ಯಕರ್ತೆಯರ ಸಹಾಯ ಪಡೆದು ಮೊಬೈಲ್ ನಂಬರ್ ಅಪ್ ಡೇಟ್ ಮಾಡಿಸಬೇಕು ಎಂದು ಸೂಚಿಸಿದರು.
ಹಲವು ಪ್ರಕರಣಗಳಲ್ಲಿ ವ್ಯಕ್ತಿ ಮೃತಪಟ್ಟಿದ್ದರೂ ಸಹ ಅವರ ಆಧಾರ್ ಅನ್ನು ಬಳಸಿ ಸರ್ಕಾರಿ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಡೆಗಟ್ಟಲು ಜಿಲ್ಲೆಯಲ್ಲಿ ನೂರು ವರ್ಷ ಮೇಲ್ಪಟ್ಟ ವಯಸ್ಸಿನವರ ಪಟ್ಟಿ ಸಿದ್ಧಪಡಿಸಿ. ಗ್ರಾಮ ಲೆಕ್ಕಿಗರು 100 ವರ್ಷ ಮೇಲ್ಪಟ್ಟವರು ವಾಸವಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಅವರ ಆಧಾರ್ ಅನ್ನು ಅಪ್ ಡೇಟ್ ಮಾಡಬೇಕು ಎಂದು ತಿಳಿಸಿದರು.
ಆಧಾರ್ ನೋಂದಣಿದಾರರು ತಮ್ಮ ಆಧಾರ್ ಸಂಖ್ಯೆಯಲ್ಲಿ ನೋಂದಣಿ ಆಗಿರುವ ವಿಳಾಸವನ್ನು ಬದಲಾಯಿಸಿಕೊಳ್ಳಬೇಕಾದರೆ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕಿಲ್ಲ, ಸ್ವತಃ ತಾವೇ ತಮ್ಮ ಮೊಬೈಲ್ ನಲ್ಲಿ ಎಂ ಆಧಾರ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ವಿಳಾಸವನ್ನು ಬದಲಾಯಿಸಿಕೊಳ್ಳಬಹುದು. ಹಾಗೂ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆ ಫ್ರಾಡ್ ಆದರೆ ನಿಮ್ಮ ಖಾತೆಯನ್ನು ಎಂ ಆಧಾರ್ ಆ್ಯಪ್ ಮುಖಾಂತರ ಲಾಕ್ ಮಾಡಬಹುದು. ಇದರ ಕುರಿತಾಗಿ ಜನರಿಗೆ ಹೆಚ್ಚಿನ ಪ್ರಚಾರ ಕೈಗೊಳ್ಳಿ.
ಪ್ರಸ್ತುತ ಜಿಲ್ಲೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 44,164 ಮಕ್ಕಳಿಗೆ ಆಧಾರ್ ನೊಂದಣಿಯಾಗಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಜವಾಬ್ದಾರಿ ನೀಡಿ ವಿಶೇಷ ಆಧಾರ್ ಶಿಬಿರವನ್ನು ಅಯೋಜಿಸಿ. ಎಲ್ಲ ಮಕ್ಕಳಿಗೂ ಬಾಲ್ ಆಧಾರ್ ನೋಂದಣಿ ಮಾಡಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಆಧಾರ್ ನೋಡಲ್ ಅಧಿಕಾರಿ ವಿಜಯ್ ಕುಮಾರ್, ಜಿಲ್ಲಾಧಿಕಾರಿ ಕಚೇರಿಯ ಆಧಾರ್ ಮುಖ್ಯಸ್ಥ ವೇಣುಗೋಪಾಲ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ಜಿಲ್ಲಾ ಸಾಕ್ಷರತಾ ಕಚೇರಿಯ ಅಧಿಕಾರಿ ಲಕ್ಷ್ಮಿ, ರಂಗಪ್ಪ ಸಾಲಾಪೂರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.