ಶಿವಮೊಗ್ಗ: ಮತದಾನ ಎಂಬುದು ಕೇವಲ ಹಕ್ಕಲ್ಲ. ಅದು ಶಕ್ತಿಯಾಗಿದ್ದು, ಸಮರ್ಥ ಜನ ನಾಯಕನನ್ನು ಆಯ್ಕೆ ಮಾಡುವ ಹೊಣೆ ಯುವ ಪೀಳಿಗೆ ಮೇಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಸರಸ್ವತಿ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮತದಾನ ಎನ್ನುವುದು ಪ್ರಜಾಪ್ರಭುತ್ವವಾದಿ. ಪ್ರಜಾಪ್ರಭುತ್ವದ ಅಡಿಪಾಯವೇ ಪ್ರಜೆಗಳು. ಇಲ್ಲಿ ಪ್ರಜೆಗಳೇ ಪ್ರಭುಗಳು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ, ಮತ, ಭಾಷೆ, ಬಣ್ಣಗಳ ಬೇಧ-ಭಾವವಿಲ್ಲದೆ ಎಲ್ಲರಿಗೂ ಮತದಾನ ಮಾಡಲು ಸಂವಿಧಾನಾತ್ಮಕವಾಗಿ ಸಮಾನ ಹಕ್ಕು ನೀಡಲಾಗಿದೆ. ಅಭ್ಯರ್ಥಿಯ ಗುಣ, ನಡತೆ, ಸ್ವಭಾವ, ವಿದ್ಯಾರ್ಹತೆ, ಸಾಮಾಜಿಕ ಕಳಕಳಿ, ದೇಶಪ್ರೇಮ ಮುಂತಾದ ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಜಿಪಂ ಸಿಇಒ ಎಂ.ಎಲ್.ವೈಶಾಲಿ ಮಾತನಾಡಿ, 18 ವರ್ಷ ತುಂಬಿದ ಯುವಕ-ಯುವತಿಯರೆಲ್ಲರೂ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಿ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮತದಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿ, ಅಸಮರ್ಥರು ವಿಜೇತರಾಗಿ ಆಡಳಿತ ನಡೆಸುವಲ್ಲಿ ವಿಫಲರಾದಲ್ಲಿ ಅವರನ್ನು ಪ್ರಶ್ನಿಸುವ ಮತ್ತು ಕೇಳುವ ನೈತಿಕ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಚುನಾವಣೆಯ ಹಬ್ಬದಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕು ಎಂದರು.
ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಅಲ್ಲದೇ ರಾಷ್ಟೀಯ ಮತದಾರರ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ನಾತಕೋತ್ತರ ಪದವಿ, ಪದವಿ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಎಡಿಸಿ ಜಿ.ಅನುರಾಧಾ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ವೀರಭದ್ರಯ್ಯ, ಡಿಡಿಪಿಯು ನಾಗರಾಜ ಕಾಗಲ್ಕರ್, ಡಿಡಿಪಿಐ ಎನ್.ಎಂ.ರಮೇಶ್, ಚುನಾವಣಾ ಶಾಖೆ ತಹಶೀಲ್ದಾರ್ ಎಂ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.