ಉಡುಪಿ: ಬ್ಯಾಂಕ್ನಲ್ಲಿ ಬೋರ್ಡ್, ಕರಪತ್ರ ಸಹಿತ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿರಬೇಕು. ಜನಸಾಮಾನ್ಯರಿಗೆ ಸಂವಹನ ನಡೆಸಲು ಸ್ಥಳಿಯ ಭಾಷೆ ಬಲ್ಲ ಸಿಬ್ಬಂದಿಯನ್ನು ನೇಮಿಸಬೇಕು. ಇದರಿಂದ ಬ್ಯಾಂಕಿನ ವ್ಯವಹಾರಗಳು ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್ ತಿಳಿಸಿದರು.
ಬುಧವಾರ ಮಣಿಪಾಲ ರಜತಾದ್ರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕರ ಜೀವನಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿ, ಜನರನ್ನು ಯೋಜನೆಯ ಫಲಾನುಭವಿಗಳನ್ನಾಗಿಸಲು ಕ್ರಮ ವಹಿಸಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಸಿಡಿ ರೇಶಿಯೋ ಶೇ.46.92 ರಷ್ಟು ಕಡಿಮೆಯಾಗಿ 0.02 ರಷ್ಟು ಹಿನ್ನಡೆಯಾಗಿದೆ. ಸಾಲ ಮತ್ತು ಠೇವಣಿ ಅನುಪಾತದಲ್ಲಿ ಜಿಲ್ಲೆಯು ಶೇ. 50 ಕ್ಕಿಂತ ಕಡಿಮೆ ಇರುವುದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದ್ದು, ಇದನ್ನು ಹೆಚ್ಚಿಸಲು ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂಕರ್ಸ್ಗಳು ಕಾರ್ಯಪ್ರವೃತ್ತರಾಗಬೇಕು. ಆರ್ಥಿಕತೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಲು ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕೆನರಾ ಬ್ಯಾಂಕ್ನ ರೀಜನಲ್ ಮ್ಯಾನೆಜರ್ ಶೀಬಾ ಸಹಜನ್ ಮಾತನಾಡಿ, ಜಿಲ್ಲೆಯ ಬ್ಯಾಂಕ್ಗಳಲ್ಲಿ ಕಳೆದ ಸಾಲಿನಲ್ಲಿ 52,676 ಕೋಟಿ ರೂ. ವ್ಯವಹಾರ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿ 58,352 ಕೋಟಿ ರೂ ವ್ಯವಹಾರ ನಡೆದು, 5676 ಕೋಟಿ ರೂ. ಹೆಚ್ಚಾಗಿ ಶೇ.10.78 ರಷ್ಟು ಬೆಳೆವಣಿಗೆಯಾಗಿದೆ ಎಂದರು. ಜಿಲ್ಲೆಯಲ್ಲಿ ಆದ್ಯತಾ ವಲಯಗಳಿಗೆ 2703.09 ಕೋಟಿ ರೂ., ಸಾಲ ವಿತರಣೆ ಮಾಡಿ ಶೇ. 30.74 ಹಾಗೂ ಆದ್ಯತೇತರ ವಲಯಗಳಿಗೆ 1677.82 ಕೋಟಿ ರೂ. ಸಾಲ ವಿತರಣೆ ಮಾಡಿ, ಶೇ. 43.65 ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ಆರ್.ಬಿ.ಐ ನ ಎಕ್ಸಿಕ್ಯುಟಿವ್ ಇಳಾ ಸಾಹು, ನಬಾರ್ಡ್ನ ಡಿ.ಡಿ.ಎಂ ಸಂಗೀತಾ ಕರ್ತಾ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ನ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ರಾಜೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.