ಜಿಲ್ಲೆ

ನರೇಗಾ ಕೆಲಸ ಮಾಡಿ ಕೂಲಿ ಪಡೆಯಿರಿ

ಕೊಪ್ಪಳ: ಗ್ರಾಮೀಣರಿಗೆ ನರೇಗಾ ಯೋಜನೆ ವರವಾಗಿದೆ. ನಿಮ್ಮೂರಲ್ಲೇ 100 ದಿನಗಳ ಕೆಲಸ ಪಡೆದು ಕೂಲಿ ಪಡೆಯಿರಿ ಎಂದು ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ. ತಿಳಿಸಿದರು.

ತಾಲೂಕಿನ ಇಂದರಗಿ ಗ್ರಾಮದ ಹೊಸ ಕೆರೆ ಹೂಳೆತ್ತುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಬೇಸಿಗೆ ಅಂಗವಾಗಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ. 370ರೂ. ಕೂಲಿ ಇದ್ದು, ಅರ್ಹರು ಕೆಲಸ ಪಡೆದು ನಿರ್ವಹಿಸಿ. ಒಂದು ಜಾಬ್​ ಕಾರ್ಡ್​ಗೆ 100 ಮಾನವ ದಿನಗಳ ಕೆಲಸ ಕೊಡಲಾಗುವುದು. ಕೆಲಸ ಅರಸಿ ಬೇರೆ ಊರಿಗೆ ತೆರಳಬೇಡಿ. ಪ್ರತಿಯೊಬ್ಬರೂ 40 ಕ್ಯೂಬಿಕ್​ ಮೀಟರ್​ ಮಣ್ಣು ಅಗೆದರೆ ಮಾತ್ರ 370ರೂ. ಕೂಲಿ ಹಣ ಸಿಗಲಿದೆ. ಅಳತೆ ಕಡಿಮೆ ಆದರೆ ಕೂಲಿ ಮೊತ್ತವೂ ಕಡಿಮೆ ಆಗುವುದು ಎಂದರು.

ಸ್ತ್ರೀ ಚೇತನ ಅಭಿಯಾನದಡಿ ಮಹಿಳೆಯರು ಹೆಚ್ಚು ತೊಡಗಿಕೊಳ್ಳಲು ಅನುವು ಮಾಡಿಕೊಡಲಾಗುತ್ತಿದೆ. ಮಹಿಳಾ ಕಾಯಕ ಬಂಧುಗಳನ್ನು ನೇಮಿಸಲಾಗಿದೆ. ಜೂನ್​ವರೆಗೆ ಕೂಲಿ ಕೆಲಸ ಸಿಗಲಿದೆ. ಮಳೆಗಾಲ ಆರಂಭವಾದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ನರೇಗಾ ಹಣ ನೆರವಾಗಲಿದೆ. ಮಹಿಳೆಯರ ಭಾಗವಹಿಸುವಿಕೆಯಿಂದ ಮಹಿಳಾ ಸಬಲೀಕರಣವಾಗುವುದು. ದುರ್ಬಲರಿಗೂ ಕೆಲಸದಲ್ಲಿ ರಿಯಾಯಿತಿ ಇದೆ. ಅವರು ಸಾಮಾನ್ಯ ವ್ಯಕ್ತಿಗಳಿಗಿಂತ ಅರ್ಧದಷ್ಟು ಕೆಲಸ ಮಾಡಿದರೂ ಪೂರ್ಣ ಕೂಲಿ ಮೊತ್ತ ಸಿಗುತ್ತದೆ ಎಂದು ತಿಳಿಸಿದರು.

ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ನೆರಳು, ಕುಡಿವ ನೀರು ಸೌಲಭ್ಯ ಕಲ್ಪಿಸಿದ ಬಗ್ಗೆ ಪರಿಶೀಲಿಸಿದರು. ತಾಪಂ ಸಹಾಯಕ ನಿರ್ದೇಶಕ ಯಂಕಪ್ಪ, ಐಇಸಿ ತಾಲೂಕು ಸಂಯೋಜಕ ದೇವರಾಜ ಪತ್ತಾರ, ಪಿಡಿಒ ನಾಗರಾಜ, ತಾಂತ್ರಿಕ ಸಹಾಯಕ ಕೊಟ್ರೇಶ್​ ಜವಳಿ, ಬೇರ್​ ಫೂಟ್​ ಟೆಕ್ನಿಷಿಯನ್​ ಗಾಳೆಪ್ಪ, ಗ್ರಾಮ ಕಾಯಕ ಮಿತ್ರ ಯಮನಮ್ಮ, ಕರವಸೂಲಿಗಾರ ಮಂಜುನಾಥ ಕುರಿ ಇತರರಿದ್ದರು.