ಬೈಕ್​ ರ್ಯಾಲಿ ಅಂಗವಾಗಿ ಶುಕ್ರವಾರ ಕೊಪ್ಪಳದಲ್ಲಿ ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಡಿಪಿಐ ಶ್ರೀಶೈಲ ಬಿರಾದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ಜಿಪಂ ಸಹಾಯಕ ಕಾರ್ಯದರ್ಶಿ ಶಿವಪ್ಪ ಸುಬೇದಾರ, ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ ಇದ್ದರು. 
ಜಿಲ್ಲೆ

ಅಧಿಕಾರಿಗಳೆಲ್ಲ ರ್ಯಾಲಿಯಲ್ಲಿ ಭಾಗಿಯಾಗಿ:ಪಾಂಡೆಯ

ಕೊಪ್ಪಳ: ಲೋಕಸಭೆ ಚುನಾವಣೆ ಅಂಗವಾಗಿ ಮತದಾನ ಜಾಗೃತಿಗಾಗಿ ಜಿಲ್ಲಾಡಳಿತದಿಂದ ಮೇ 4ರಂದು ಬೈಕ್​ ರ್ಯಾಲಿ ಹಮ್ಮಿಕೊಂಡಿದ್ದು, ಎಲ್ಲ ಅಧಿಕಾರಿಗಳು ನಿಮ್ಮ ಸಿಬ್ಬಂದಿಯೊಂದಿಗೆ ಭಾಗವಹಿಸಿ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಹೇಳಿದರು.

ರ್ಯಾಲಿ ಅಂಗವಾಗಿ ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮೇ 7ರಂದು ಮತದಾನ ನಡೆಯಲಿದೆ. ಅದರ ಅಂಗವಾಗಿ ರ್ಯಾಲಿ ಆಯೋಜಿಸಲಾಗಿದೆ. ಮೇ 4ರಂದು ಬೆಳಗ್ಗೆ 9 ಗಂಟೆಗೆ ಕೊಪ್ಪಳದ ತಾಲೂಕು ಕ್ರೀಡಾಂಗಣದಿಂದ ಆರಂಭವಾಗಲಿದೆ. ಅಶೋಕ ವೃತ್ತ, ಬಸ್​ನಿಲ್ದಾಣ ಮಾರ್ಗ, ಭಾಗ್ಯನಗರ ರೈಲ್ವೆ ಮೇಲ್ಸೇತುವೆ, ಭಾಗ್ಯನಗರದ ವಿವಿಧ ವಾರ್ಡ್​ಗಳಲ್ಲಿ ಸಂಚರಿಸಲಿದೆ. ಅಲ್ಲಿಂದ ಓಜನಳ್ಳಿ ಗ್ರಾಮಕ್ಕೆ ತೆರಳಲಿದ್ದು, ಮರಳಿ ಭಾಗ್ಯನಗರ ಕ್ರಾಸ್​ನಿಂದ ಕಿನ್ನಾಳ ರಸ್ತೆ ಮೂಲಕ ಅಶೋಕ ವೃತ್ತದಿಂದ ತಾಲೂಕು ಕ್ರೀಡಾಂಗಣ ತಲುಪಲಿದೆ. ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಹಾಜರಾಗಿ. ಬೈಕ್​ ಹಾಗೂ ಹೆಲ್ಮೆಟ್​ ಧರಿಸುವುದು ಕಡ್ಡಾಯ. ಎಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸಿ ಎಂದರು.

ರ್ಯಾಲಿಯಲ್ಲಿ ಭಾಗಿಯಾಗುವವರಿಗೆ ಕುಡಿವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಿ. ಹಿಂಬದಿ ಸವಾರರಿಗೆ ಟೊಪ್ಪಿಗೆ, ಮತದಾನ ಘೋಷವಾಕ್ಯಗಳ ಬಂಟಿಂಗ್​, ವಾಹನಗಳಲ್ಲಿ ಜಿಂಗಲ್ಸ್​ ಪ್ರಸಾರ ಮಾಡಿ. ಪೊಲೀಸರು ಅಗತ್ಯ ಭದ್ರತೆ ಕಲ್ಪಿಸಿ. ಆರೋಗ್ಯಾಧಿಕಾರಿಗಳು ತುರ್ತು ಚಿಕಿತ್ಸೆಗೆ ಒಂದು ಆ್ಯಂಬುಲೆನ್ಸ್​, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಅಗತ್ಯ ಚಿಕಿತ್ಸಾ ಸಾಮಗ್ರಿ, ಔಷಧ ವೈದ್ಯರ ತಂಡ ನಿಯೋಜಿಸಿ. ಆಯಾ ಇಲಾಖೆ ಅಧಿಕಾರಿಗಳ ಜವಾಬ್ದಾರಿಯನ್ನು ಇಲಾಖೆ ಮುಖ್ಯಸ್ಥರು ವಹಿಸಬೇಕು. ಶಿಸ್ತು ಹಾಗೂ ಅರ್ಥಪೂರ್ಣ ರ್ಯಾಲಿಗೆ ಸಹಕರಿಸಿ ಎಂದು ಸಲಹೆ ನೀಡಿದರು.

ಡಿಡಿಪಿಐ ಶ್ರೀಶೈಲ ಬಿರಾದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ಜಿಪಂ ಸಹಾಯಕ ಕಾರ್ಯದರ್ಶಿ ಶಿವಪ್ಪ ಸುಬೇದಾರ, ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನನವರ ಹಾಗೂ ಇತರ ಅಧಿಕಾರಿಗಳಿದ್ದರು.