ಕೊಪ್ಪಳ: ನರೇಗಾ ಕಾಮಗಾರಿಗಳಿಗೆ ಅಗತ್ಯ ಸಾಮಗ್ರಿ ನಿಯಮಾನುಸಾರ ಖರೀದಿಸಲು ಮಾದರಿ ಟೆಂಡರ್ ಡಾಕ್ಯೂಮೆಂಟ್ ತರಬೇತಿ ಸದುಪಯೋಗ ಪಡೆದುಕೊಳ್ಳುವಂತೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.
ನಗದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕಾಮಗಾರಿ ಅನುಷ್ಠಾನದಲ್ಲಿ ಕೆಟಿಪಿಪಿ ಮತ್ತು ಕೆಪಿಪಿಪಿ ನಿಯಮಗಳ ಪಾಲನೆ ಮತ್ತು ಕಾರ್ಯವಿಧಾನ ಕಾನೂನಿನ ಒಂಭತ್ತು ಅಂಶಗಳಿವೆ ವಿಷಯ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಯಾವುದೇ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ನಾವು ಮೊದಲು ನಿಯಮಾವಳಿ ಅರಿಯಬೇಕು. ಮಾರ್ಗಸೂಚಿಗಳನ್ನು ಸರಿಯಾಗಿ ಅರ್ಥೈಸಿಕೊಂಡು ಯೋಜನೆ ಅನುಷ್ಠಾನ ಮಾಡಬೇಕು. ಈ ಬಗ್ಗೆ ಸಾರ್ವಜನಿಕರಿಗೂ ಸರಿಯಾದ ತಿಳಿವಳಿಕೆ ನೀಡಬೇಕು. ಆಗ ಮಾತ್ರ ಪಾರದರ್ಶಕ ಆಡಳಿತ ನೀಡಲು ಸಾಧ್ಯ. ಕಾರ್ಯವಿಧಾನ ಕಾನೂನಿನ ಒಂಭತ್ತು ಅಂಶಗಳನ್ನು ಒಳಗೊಂಡಿದೆ. ಈ ಬಗ್ಗೆ ನಿಮಗೆಲ್ಲ ತಿಳಿದಿರಬೇಕು ಎಂದರು.
ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಆಡಿಟ್ ಅಧಿಕಾರಿ ನಿಸಾರ್ ಅಹ್ಮದ್ ನರೇಗಾ ಕಾಮಗಾರಿಗಳಿಗೆ ಟೆಂಡರ್ ಆಹ್ವಾನ, ನಿಯಮಾವಳಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಬಗ್ಗೆ ತರಬೇತಿ ನೀಡಿದರು. ಜಿಲ್ಲೆಯ ಎಲ್ಲ ಗ್ರಾಪಂ ಪಿಡಿಒಗಳು, ಎಡಿಪಿಸಿ ಡಿಎಂಐಎಸ್, ಡಿಐಇಸಿ, ತಾಲೂಕ ಎಂಐಎಸ್ ಸಂಯೋಜಕರು ಇದ್ದರು.