ಜಿಲ್ಲೆ

ವಿಜಯದಶಮಿ ವೇಳೆಗೆ ಹೊಸ ಪಕ್ಷ, ಶಾಸಕ ಯತ್ನಾಳ್​ ಹೇಳಿಕೆ

ಕೊಪ್ಪಳ: ರಾಜ್ಯದ ಜನರಿಗೆ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮೇಲೆ ವಿಶ್ವಾಸ ಹೋಗಿದೆ. ಹೊಸ ರಾಜಕೀಯ ಪಕ್ಷದ ಉದಯ ಅವಶ್ಯವಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗಲಿದ್ದಾರೆಂಬುದನ್ನು ನೋಡಿಕೊಂಡು ವಿಜಯದಶಮಿ ವೇಳೆಗೆ ಹೊಸ ಪಕ್ಷ ಸ್ಥಾಪಿಸುವೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯೇಂದ್ರನನ್ನು ಬಿಟ್ಟು ಬೇರೆ ಯಾರು ರಾಜ್ಯಾಧ್ಯಕ್ಷರಾದರೂ ಸ್ವಾಗತಿಸುವೆ. ವಂಶಾಡಳಿತ ತೊಲಗಬೇಕು. ಅವರೊಂದೇ ರೈತನ ಮಕ್ಕಳಲ್ಲ. ನಾನೂ ರೈತನ ಮಗನೇ. ನನ್ನ ಕೈಗೆ ಅಧಿಕಾರ ಕೊಟ್ಟು ನೋಡಲಿ ಇತಿಹಾಸ ಬದಲಿಸುವೆ. ನಾನೂ ಈಗಲೂ ಬಿಜೆಪಿಯಲ್ಲಿರುವೆ. ಎಲ್ಲರೂ ನನ್ನೊಂದಿಗಿದ್ದಾರೆ. ಅಪ್ಪ&ಮಗ ಭ್ರಷ್ಟರಿದ್ದರೂ ಅವರೇ ಬೇಕೆಂದರೆ ನಾವೇನು ಮಾಡುವುದು ? ಯಾರನ್ನು ರಾಜ್ಯಾಧ್ಯಕ್ಷ ಮಾಡುತ್ತಾರೆಂದು ನೋಡುವೆ. ಬಳಿಕ ಹೊಸ ಪಕ್ಷ ಹುಟ್ಟುಹಾಕುವೆ ಎಂದರು.

ವೀರಶೈವ&ಲಿಂಗಾಯತ ಒಂದೇ ಎನ್ನುವ ಸ್ವಾಮಿಗಳು ಸಮಾವೇಶದ ಬೋರ್ಡ್​ನಲ್ಲೇ ಲಿಂಗಾಯತ ಪದ ಹಾಕಿಲ್ಲ. ಶ್ರೀಮಂತರ ಮನೆಯಲ್ಲಿ ಕುಳಿತು ಮಾತನಾಡುವುದಲ್ಲ. ಬಡವರ ಮನೆಗೆ ಪಾದಪೂಜೆಗೆ ಬರಲಿ. ದೊಡ್ಡ ಮೊತ್ತ ಪಾಕೆಟ್​ ನೀಡುವವರ ಮನೆಗೆ ಹೋಗುವುದಲ್ಲ. ಯಡಿಯೂರಪ್ಪ&ಶ್ಯಾಮನೂರು ಶಿವಶಂಕರಪ್ಪ&ಈಶ್ವರ ಖಂಡ್ರೆ ಮೂವರು ಶ್ರೀಮಂತ ತ್ರೀಮೂರ್ತಿಗಳು. ಸ್ವಾಮಿಗಳು ತಪಸ್​ ಶಕ್ತಿ ಕಳೆದುಕೊಂಡಿದ್ದಾರೆ. ಹಿಂದೆ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುವಾಗ ಸಾವಿರಾರು ಸ್ವಾಮಿಗಳು ಬೇಡವೆಂದರು. ಬಳಿಕ ತಮಗೆ ಪಾಕೆಟ್​ ಬಂದಿಲ್ಲವೆಂದು ಬಡಿದಾಡಿದರು ಎಂದು ಲೇವಡಿ ಮಾಡಿದರು.

ಈಗಲೂ ಕೆಲ ಸ್ವಾಮಿಗಳು ಡಿಸಿಎಂ ಡಿ.ಕೆ.ಶಿವಕುಮಾರ್​ ಬಳಿ 11,11,101ರೂ.ದಣೆ ಪಡೆದು ಅವರು ಸಿಎಂ ಆಗಲಿ. ಅದಕ್ಕೆ ತಮ್ಮ ಆಶೀರ್ವಾದವಿದೆ ಎನ್ನುತ್ತಾರೆ. ಸ್ವಾಮಿಗಳ ಕೆಲಸ ರಾಜಕೀಯ ಮಾಡುವುದಲ್ಲ. ಮಠ ಕಟ್ಟುವುದು. ಬಡ ಮಕ್ಕಳಿಗೆ ಶಿಕ್ಷಣ ನೀಡುವುದು. ಅದನ್ನು ಅವರು ಮಾಡಲಿ. ಸಮುದಾಯ ಪರ ಹೋರಾಡುತ್ತಿರು ಕೂಡಲ ಸಂಗಮ ಶ್ರೀಗಳಿಗೆ ಮಠಕ್ಕೆ ಬರದಂತೆ ಬೀಗ ಹಾಕಿದವರ ಮನೆಯೂ ಇನ್ನು 10 ವರ್ಷದಲ್ಲಿ ಬೀಗ ಬೀಳಲಿದೆ ಎಂದು ಭವಿಷ್ಯ ನುಡಿದರು.