ಕೊಪ್ಪಳ: ಸೋಮವಾರ ಗವಿಮಠಕ್ಕೆ ಬಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸುದ್ದಿಗಾರರೊಂದಿಗೆ ಮಾತನಾಡುವಾಗ ಮಾತಿನ ಹಿಡಿತ ತಪ್ಪಿದರು. ಸುದ್ದಿಗಾರರ ಗರಂ ಆಗುತ್ತಲೇ ಪೇಚಿಗೆ ಸಿಲುಕಿ ಕಾಲ್ಕಿತ್ತರು.
ಹೊಸ ಪಕ್ಷಕಟ್ಟುತ್ತಿರಾ ? ಜಾರಕಿಹೊಳಿ, ಕುಮಾರ ಬಂಗಾರಪ್ಪ ನಿಮ್ಮ ಜತೆಗಿದ್ದಾರಾ ಎಂಬ ಪ್ರಶ್ನೆಗೆ ಗರಂ ಆದ ಯತ್ನಾಳ್, ನೀವು ವಿಜಯೇಂದ್ರ ಕಳಿಸಿದ ಪ್ರಶ್ನೆ ಕೇಳಬೇಡಿ. ಮಾಧ್ಯದವರು ಯಡಿಯೂರಪ್ಪ, ವಿಜಯೇಂದ್ರನ ಚೇಲಾಗಳು. ವಿಜಯೇಂದ್ರನ ಚೇಲಾಗಳಿದ್ದರೆ ಸುಮ್ಮನೆ ಹೋಗಿಬಿಡಿ. ಯಾವ ಮಾಧ್ಯಮಗಳು ಯಾರ ಚೇಲಾಗಳೆಂದು ನನಗೆ ಗೊತ್ತಿದೆ. ನೀವು ನನ್ನನ್ನು ಬಿಟ್ಟುಬಿಡಿ. ಅವರು ಹೇಳಿದಂತೆ ನನ್ನ ಬಳಿ ಪ್ರಶ್ನೆ ಕೇಳುತ್ತಾರೆ. ನಿಮ್ಮ ಅಗತ್ಯ ನನಗಿಲ್ಲ. ಸಾಮಾಜಿಕ ಜಾಲತಾಣ ಮೂಲಕ ಜನಾಭಿಪ್ರಾಯ ಸಂಗ್ರಹಿಸುವೆ.
ನೀವು ಒದರಾಡುವಂತಿದ್ದರೆ ಬರಬೇಡಿ ಗೆಟ್ಔಟ್ ಎಂದು ಕೂಗಾಡಿದರು. ಮಾತಿನ ಮೇಲೆ ಹಿಡಿತ ಕಳೆದುಕೊಂಡು ರೇಗಾಡಿದರು. ಇದಕ್ಕೆ ಅವರ ಬೆಂಬಲಿಗರು ದನಿಗೂಡಿಸಿ ಅರಚಿದರು. ಯತ್ನಾಳ್ ನಡೆಗೆ ಸಿಡಿಮಿಡಿಗೊಂಡ ಪತ್ರಕತ್ರು ಯಾರ ಪರವಾಗಿ ಮಾಧ್ಯಮಗಳಿಲ್ಲ. ನೀವು ಹಿಡಿತದಲ್ಲಿ ಮಾತನಾಡಿ ಎಂದು ತರಾಟೆ ತೆಗೆದುಕೊಳ್ಳುತ್ತಲೇ ಯತ್ನಾಳ್ ಅಲ್ಲಿಂದ ಕಾಲ್ಕಿತ್ತರು.