ಜಿಲ್ಲೆ

ತಾಲೂಕಿಗೆ 10 ಸಾವಿರ ಸದಸ್ಯರ ನೋಂದಣಿ

ಕೊಪ್ಪಳ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಕೊಪ್ಪಳ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಕನಿಷ್ಠ 10 ಸಾವಿರ ಸದಸ್ಯರನ್ನು ಮಾಡುವ ಗುರಿ ಹೊಂದಿದ್ದೇವೆ ಎಂದು ಮಹಾಸಭಾ ರಾಜ್ಯ ಉಪಾಧ್ಯಕ್ಷ ಕೆ.ಬಿ.ಶ್ರೀನಿವಾಸ ರೆಡ್ಡಿ ತಿಳಿಸಿದರು.

ರಾಜ್ಯಾದ್ಯಂತ ಸಂಟನೆಗೆ ಆದ್ಯತೆ ನೀಡಲಾಗಿದೆ. ಕೊಪ್ಪಳದಲ್ಲಿ ಇತ್ತೀಚೆಗೆ ಜಿಲ್ಲಾ ಹಾಗೂ ಕುಷ್ಟಗಿ, ಗಂಗಾವತಿ, ಕೊಪ್ಪಳ ತಾಲೂಕು ಸಮಿತಿಗಳು ರಚನೆಗೊಂಡಿವೆ. ಬಾಕಿ ತಾಲೂಕುಗಳಲ್ಲಿ ಸಂಟನೆ ಬಲ ಪಡಿಸಬೇಕಿದೆ. ಸದ್ಯ 1290 ಸದಸ್ಯರಿದ್ದಾರೆ. ತಾಲೂಕಿನಲ್ಲಿ ಕನಿಷ್ಠ 10 ಸಾವಿರ ಸದಸ್ಯರನ್ನು ಮಾಡುವ ಗುರಿ ಹಾಕಿಕೊಂಡಿದ್ದೇವೆ. 250ರೂ. ನೀಡುವ ಮೂಲಕ ವೀರಶೈವ ಲಿಂಗಾಯತರು ಸದಸ್ಯತ್ವ ಪಡೆಯಬಹುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಶುಕ್ರವಾರವೇ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಸಿ ರಾಜ್ಯಸಮಿತಿಯಿಂದ ನೀಡಿದ ಸಂದೇಶ ನೀಡಲಾಗುವುದು. ಸಮುದಾಯ ಜನರು ಕೊಪ್ಪಳದಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಎಲ್ಲರೂ ಸದಸ್ಯರಾಗಿ ಒಗ್ಗೂಡಬೇಕು. ಮಹಾಸಭಾ 19ನೇ ದಶಕದಿಂದ ಅಸ್ತಿತ್ವದಲ್ಲಿದೆ. ರಾಷ್ಟ್ರ, ರಾಜ್ಯ ನಾಯಕರು ಶ್ರಮವಹಿಸಿ ಸಮುದಾಯ ಕಟ್ಟಿದ್ದಾರೆ. ಅದನ್ನು ನಾವೆಲ್ಲ ಮುಂದುವರೆಸಿಕೊಂಡು ಹೋಗಬೇಕಿದೆ. ವೀರಶೈವ ಲಿಂಗಾಯತ ಒಳ ಪಂಡಗಳದ ಎಲ್ಲರೂ ಸದಸ್ಯರಾಗಬೇಕು. ಒಳ ಪಂಗಡಗಳಲ್ಲಿ ಮದುವೆ ಮಾಡಿಸುವ ಮೂಲಕ ಒಗ್ಗೂಡಿಸುವ ಕೆಲಸ ನಡೆದಿದೆ ಎಂದರು.

ಮಹಾಸಭಾ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪುತ್ರಪ್ಪ ಕಾಡನವರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಮೇಶ ಕವಲೂರು ಇದ್ದರು.