ಜಿಲ್ಲೆ

ಬಿಸಿಯೂಟದಿಂದ ಮುಖ್ಯ ಶಿಕ್ಷಕರ ಕೈ ಬಿಡಿ

ಕೊಪ್ಪಳ: ಬಿಸಿಯೂಟ ಯೋಜನೆ ಜವಾಬ್ದಾರಿಯಿಂದ ಶಾಲಾ ಮುಖ್ಯ ಶಿಕ್ಷಕರನ್ನು ಬಿಡುಗಡೆಗೊಳಿಸಿ ಖಾಸಗಿ ಏಜೆನ್ಸಿಗೆ ವಹಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಜಿಲ್ಲಾ ಪದಾಧಿಕಾರಿಗಳು ಗುರುವಾರ ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯಗೆ ಮನವಿ ಸಲ್ಲಿಸಿದರು.

ಕಳೆದೆರೆಡು ದಶಕದಿಂದ ಬಿಸಿಯೂಟ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಇದರಿಂದ ಮುಖ್ಯ ಶಿಕ್ಷಕರಿಗೆ ಒತ್ತಡ ಹೆಚ್ಚಿದೆ. ಒತ್ತಡ ತಾಳದೆ ಬಹುತೇಕರು ಅನಾರೋಗ್ಯಕ್ಕೆ ಈಡಾಗಿದ್ದಾರೆ. ಕೆಲವರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಮೊಟ್ಟೆ ವಿತರಣೆ ಕಾರ್ಯಕ್ರಮ ಜಾರಿ ಮಾಡಿರುವುದು ಸ್ವಾಗತಾರ್ಹ. ಆದರೆ, ನಿತ್ಯ ಆನ್​ಲೈನ್​ನಲ್ಲಿ ಮಾಹಿತಿ ದಾಖಲಿಸುವುದು ಹೆಚ್ಚಿನ ಹೊರಯಾಗುತ್ತಿದೆ. ಮಾರುಕಟ್ಟೆಯಲ್ಲಿ ಮೊಟ್ಟೆ ದರ ಏರಿಳಿತವಿದ್ದು ಮುಖ್ಯ ಶಿಕ್ಷಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಕಡಿಮೆ ದರಕ್ಕೆ ಗುಣಮಟ್ಟದೆ ಮೊಟ್ಟೆ ತರುವುದು ಕಷ್ಟ. ಗ್ರಾಮೀಣ ಭಾಗದಲ್ಲಿ ನಿತ್ಯ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣು ಲಭ್ಯವಾಗುವುದಿಲ್ಲ. ದಾಸ್ತಾನಿಗೆ ವ್ಯವಸ್ಥೆ ಇಲ್ಲದ ಕಾರಣ ಒಮ್ಮೆಲೇ ದಾಸ್ತಾನು ಮಾಡುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಮುಖ್ಯ ಶಿಕ್ಷಕರನ್ನು ಬಿಸಿಯೂಟ ಯೋಜನೆಯಿಂದ ಮುಕ್ತಿಗೊಳಿಸಬೇಕು. ಇದರಿಂದ ಶಾಲಾ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನ ನೀಡಲು ಅನುಕೂಲ. ಖಾಸಗಿ ಏಜೆನ್ಸಿಗಳಿಗೆ ನೀಡುವುದರಿಂದ ನಿರ್ವಹಣೆ ಸುಲಭವಾಗಲಿದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಮುಖ್ಯ ಶಿಕ್ಷಕರು ತೊಡಗಿಸಿಕೊಳ್ಳಲು ಪೂರಕವಾಗಲಿದೆ ಎಂದು ತಿಳಿಸಿದರು.

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್​, ಪ್ರ.ಕಾ. ಮಂಜುನಾಥ ಬಿ., ಜಿಲ್ಲಾ ಗೌರವ ಅಧ್ಯಕ್ಷ ಈರಪ್ಪ ಬಳ್ಳೊಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ, ತಾಲೂಕು ಉಪಾಧ್ಯೆ ಸುಮತಿ ಸಿ., ಪ್ರಮುಖರಾದ ಮಹಾವೀರ ಕಲಭಾವಿ, ವೀರೇಶ ಅರಳಿಕಟ್ಟಿ, ಪೂರ್ಣಿಮಾ ಪಟ್ಟಣಶೆಟ್ಟಿ, ಕೊಟ್ರಪ್ಪ ಗಡಗಿ, ಮಹೇಶ ಟಂಕಸಾಲಿ, ಬಸವರಾಜ ಕಮಲಾಪುರ ಇತರರಿದ್ದರು.