ಜಿಲ್ಲೆ

ಮುಂಗಾರು ಹಂಗಾಮಿಗಿಲ್ಲ ಆತಂಕ, ಆಣೆಕಟ್ಟೆಗೆ ಹೆಚ್ಚಿದ ಒಳಹರಿವು

Kopala - Raveendra V K

ಕೊಪ್ಪಳ: ತಾಲೂಕಿನ ಮುನಿರಾಬಾದ್​ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು, ಈಗಾಗಾಲೇ ಕ್ರಸ್ಟ್​ ಗೇಟ್​ ಹಂತಕ್ಕೆ ನೀರು ತಲುಪಿದೆ. ಮುಂಗಾರು ಹಂಗಾಮು ಬೆಳೆಗೆ ನೀರು ಬಿಡುಗಡೆಗೆ ಜೂ.27ರಂದು ಐಸಿಸಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಜಲಾಶಯ ಮೂರು ರಾಜ್ಯಕ್ಕೆ ನೀರುಣಿಸುತ್ತಿದೆ. ರಾಜ್ಯದ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳು ಕೃಷಿಗೆ ಜಲಾಶಯ ಅವಲಂಬಿಸಿವೆ. ಕ್ರಸ್ಟ್​ ಗೇಟ್​ ತುಂಡಾಗಿದ್ದು, ಮರು ನಿರ್ಮಾಣ ಕಾರ್ಯ ನಡುವೆಯೂ ಜಲಾಶಯದ ಒಡಲು ದಿನ ಕಳೆದಂತೆ ಭರ್ತಿಯಾಗುತ್ತಿದೆ. 19ನೇ ಗೇಟ್​ ನಿರ್ಮಾಣ ಕಾರ್ಯ ಮುಂದುವರೆದಿದ್ದು, ಈ ವರ್ಷ ಅಳವಡಿಕೆ ಬಹುತೇಕ ಅನುಮಾನವಿದೆ. ಅಚ್ಚುಕಟ್ಟು ವ್ಯಾಪ್ತಿ ರೈತರು ಆತಂಕದ ನಡುವೆಯೂ ಭತ್ತ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಬಹುಬೇಗ ನೀರು ಆಣೆಕಟ್ಟೆ ಸೇರುತ್ತಿದ್ದು, ಜುಲೈನಿಂದಲೇ ನೀರು ಬಿಡುಗಡೆ ಸಾಧ್ಯತೆ ದಟ್ಟವಾಗಿಸಿದೆ.

ಶುಕ್ರವಾರ ಜಲಾಶಯದಲ್ಲಿ 1610.52 ಅಡಿಗೆ ನೀರು ಸಂಗ್ರಹಗೊಂಡಿದ್ದು, 38.52 ಟಿಎಂಸಿ ಜಲ ಶೇಖರಣೆಯಾಗಿದೆ. 51,261 ಕ್ಯೂಸೆಕ್​ ಒಳಹರಿವು ದಾಖಲಾಗಿದೆ. ಇದೇ ಒಳ ಹರಿವು ಮುಂದುವರೆದರೆ ನಿತ್ಯ ಸರಾಸರಿ 4 ಟಿಎಂಸಿ ಅಡಿ ನೀರು ಹರಿದುಬರಲಿದೆ. ಸಾಮಾನ್ಯವಾಗಿ 40 ಟಿಎಂಸಿ ನೀರಿದ್ದಾಗ ನೀರಾವರಿ ಸಲಹಾ ಸಮಿತಿ ಸಭೆ ನಡೆಸುವುದು ವಾಡಿಕೆ. ಶನಿವಾರದೊಳಗೆ ನೀರಿನ ಮಟ್ಟ 40 ಟಿಎಂಸಿ ಅಡಿ ದಾಟಲಿದೆ. ಹೀಗಾಗಿ ಸಮಿತಿ ಜೂ.27ರಂದು ಸಭೆ ನಡೆಸಲು ತೀರ್ಮಾನಿಸಿದೆ. ಸಭೆಯಲ್ಲಿ ಮೂರು ರಾಜ್ಯಗಳು ಹಾಗೂ ರಾಜ್ಯದ ನಾಲ್ಕು ಜಿಲ್ಲೆಗಳಿಗೆ ನೀರು ಹಂಚಿಕೆಯಾಗಲಿದೆ.