ಜಿಲ್ಲೆ

ತಹಸೀಲ್ದಾರ್​ಗೆ ಚಾಟಿ ಬೀಸಿದ ಹೈಕೋರ್ಟ್​

ಕೊಪ್ಪಳ: ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸದ ಕಾರಣ ತಹಸೀಲ್ದಾರ್​ ವಿಠ್ಠಲ್​ ಚೌಗಲಾಗೆ ಧಾರವಾಡ ಹೈಕೋರ್ಟ್​ ಚಾಟಿ ಬೀಸಿದೆ. ಆಜ್ಞೆ ಪಾಲಿಸದಿದ್ದಲ್ಲಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಎಚ್ಚೆತ್ತ ತಹಸೀಲ್ದಾರ್​ ಆದೇಶ ಪಾಲನೆ ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಲತಾ ಅಳವಂಡಿಕರ್​ ಎಂಬುವರ ಭೂ ವ್ಯಾಜ್ಯ ಸಂಬಂಧ ಕೊಪ್ಪಳ ನ್ಯಾಯಾಲಯ ನೀಡಿದ ತಡೆಯಾಜ್ಞೆ ವಿಷಯ ಪಹಣಿ ಕಾಲಂ 11ರಲ್ಲಿ ಆದೇಶದ ವಿಷಯ ನಮೂದಿಗೆ ಸೂಚಿಸಿದೆ. ಈ ಸಂಬಂಧ ಲತಾ ಸಲ್ಲಿಸಿದ್ದ ಅರ್ಜಿಯನ್ನು ತಹಸೀಲ್ದಾರ್​ ತಿರಸ್ಕರಿಸಿದ್ದಾರೆ. ಕೋರ್ಟ್​ ಆದೇಶ ಪ್ರಸ್ತಾಪಿತ ವಿಷಯಕ್ಕೆ ಸೀಮಿತ. ವಿಶೆಷ ತಹಸೀಲ್ದಾರ್​ಗೆಂದು ಉಲ್ಲೇಖಿಸಿದ್ದು ತಮಗೆ ಅನ್ವಯ ಆಗದೆಂದು ಹಿಂಬರಹ ನೀಡಿದ್ದಾರೆ. ತಹಸೀಲ್ದಾರ್​ ಆದೇಶ ಪ್ರಶ್ನಿಸಿ ಲತಾ ಹೈಕೋರ್ಟ್​ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ತಹಸೀಲ್ದಾರ್​ ನಡೆಗೆ ಗರಂ ಆಗಿದೆ. ತಹಸೀಲ್ದಾರ್​ ಖುದ್ದಾಗಿ ಹಾಜರಾಗಬೇಕು. ನಾಲ್ಕು ಸರ್ವೇ ನಂಬರ್​ ಇದ್ದು, ತಲಾ ಒಂದಕ್ಕೆ 10 ಸಾವಿರ ರೂ.ನಂತೆ ದಂಡ ಹಾಕಲಾಗುವುದೆಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಎಚ್ಚೆತ್ತ ತಹಸೀಲ್ದಾರ್​ ಪಹಣಿಯ ಕಲಂ ನಂ.11ರಲ್ಲಿ ತಾತ್ಕಾಲಿಕ ತಡೆಯಾಜ್ಞೆ ನಮೂದಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಪ್ರಕರಣ ವಿವರ

ಕೊಪ್ಪಳ ನಗರದ ಲತಾ ರಮೇಶ ಅಳವಂಡಿಕರ್​ ಎಂಬುವರು ಭೂ ವ್ಯಾಜ್ಯ ಸಂಬಂಧ ಕೊಪ್ಪಳದ ಹಿರಿಯ ಶ್ರೇಣಿ ಸಿವಿಲ್​ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರು. ಅಳವಂಡಿ ಗ್ರಾಮದಲ್ಲಿನ ವಿವಿಧ 4 ಸರ್ವೇ ನಂಬರ್​ ನಲ್ಲಿನ ಒಟ್ಟು ಸುಮಾರು 12 ಎಕರೆ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಪಾಲಿನ ಹಕ್ಕಿಗಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಮೂಲ ಮಾಲೀಕ ವಾಮನ್​ರಾವ್​ ನಿಧನರಾಗಿದ್ದು, ಮಕ್ಕಳಾದ ಶಂಕರ್​, ರಮೇಶ ಪಾಲಿನ ಆಸ್ತಿ ಹಕ್ಕು ಸಂಬಂಧ ದಾವೆ ಹೂಡಿದ್ದಾರೆ. ಪ್ರಕರಣದಲ್ಲಿ ನ್ಯಾಯಾಲಯ ಮಾಡಿದ ಮಧ್ಯಂತರ ಆದೇಶ ನಮೂದಿಗೆ ತಹಸೀಲ್ದಾರ್​ ತಿರಸ್ಕರಿಸಿದ್ದರು.