ಜಿಲ್ಲೆ

ದಲಿತ ಮಹಿಳೆಗೆ ರಕ್ಷಣೆ ನೀಡಿ

ಕೊಪ್ಪಳ: ದಲಿತ ಮಹಿಳೆ ಎಂಬ ಕಾರಣಕ್ಕೆ ಅವಾಚ್ಯವಾಗಿ ನಿಂದಿಸಿ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ದೂರು ನೀಡಿ ವಾರವಾದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲವೆಂದು ಹುಲಿಗಿ ಗ್ರಾಮದ ನೊಂದ ಮಹಿಳೆ ಪಾರಿಜಾತ ಅಳಲು ತೋಡಿಕೊಂಡರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.6ರಂದು ಜಮೀನಿಗೆ ತೆರಳುವ ವೇಳೆ ಇಬ್ಬರು ವ್ಯಕ್ತಿಗಳು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರಶ್ನಿಸಿದ್ದಕ್ಕೆ ಮೈ&ಕೈ ಮುಟ್ಟಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ದೂರದಲ್ಲೇ ಇದ್ದ ನಮ್ಮ ದೊಡ್ಡಮ್ಮ ಬರುತ್ತಲೇ ಅವರನ್ನು ಹಿಡಿದು ಎಳೆದಾಡಿದ್ದಲ್ಲದೇ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿದ್ದಾರೆ. ಜನ ಸೇರುತ್ತಲೇ ಸುಮ್ಮನಾಗಿದ್ದಾರೆ. ಈ ವಿಷಯ ಹೊರಗೆ ತಿಳಿಸಿದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಅಳಲು ತೋಡಿಕೊಂಡರು.

ಈ ಬಗ್ಗೆ ಮುನಿರಾಬಾದ್​ ಠಾಣೆಗೆ ದೂರು ನೀಡಿದರೂ ಈವರೆಗೂ ಪ್ರಕರಣ ದಾಖಲಿಸಿಲ್ಲ. ಮೂರು ದಿನ ಠಾಣೆಯಲ್ಲಿ ಬೆಳಗಿನಿಂದ ರಾತ್ರಿವರೆಗೂ ಕುಟುಂಬ ಸಮೇತ ಕುಳಿತರೂ ಗೋಳು ಕೇಳುತ್ತಿಲ್ಲ. ಕೃತ್ಯ ಎಸಗಿದವರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಯಾವುದೇ ವಿಷಯಕ್ಕೂ ಮನಸ್ತಾಪವಿಲ್ಲ. ದಲಿತ ಮಹಿಳೆಯೆಂಬ ಕಾರಣಕ್ಕೆ ನಿಂದಿಸಿದ್ದಾರೆ. ಯಾರಿಗಾದರೂ ಹೇಳಿಕೊಂಡರೂ ತಮ್ಮನ್ನು ಏನೂ ಮಾಡಲಾಗದು ಎಂದು ಬೆದರಿಸುತ್ತಿದ್ದಾರೆಂದರು. ಮಹಿಳೆ ಪತಿ ಸೋಮಶೇಖರ ಶಿಳ್ಳಿಕ್ಯಾತರ ಇದ್ದರು.