ಕೊಪ್ಪಳ: ಅತಾರ್ಕಿಕವಾಗಿರುವ ಸದಾಶಿವ ಆಯೋಗ ವರದಿಗೆ ಸಂಪುಟದಲ್ಲಿ ಜಾರಿ ಮಾಡುವ ಬದಲು ಕಾಂತರಾಜ ಆಯೋಗ ವರದಿ ಬಹಿರಂಗೊಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಎಡಿಸಿ ಸಿದ್ರಾಮೇಶ್ವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ತೀರ್ಪು ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ತರಾತುರಿಯಲ್ಲಿ ವರದಿ ಜಾರಿ ಮಾಡಬಾರದು. ವರದಿ ಅತಾರ್ಕಿಕ, ಅಸಮರ್ಥನೀಯವಾಗಿದೆ. ಇದರಿಂದ ಪರಿಶಿಷ್ಟ ಜಾತಿಯ ಕೆಲ ಪಂಗಡಗಳಿಗೆ ಅನ್ಯಾಯವಾಗಲಿದೆ. ದತ್ತಾಂಶಗಳು ವೈಜ್ಞಾನಿಕವಾಗಿಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ವರದಿ ಜಾರಿ ಮಾಡಬಾರದು. ಜಾರಿಯಿಂದ ಸಾಮಾಜಿಕ ನ್ಯಾಯ ದೊರೆಯುವುದಿಲ್ಲವೆಂದು ಖಂಡಿಸಿದರು.
ಸಂಪುಟದಲ್ಲಿ ಏಕಾಏಕಿ ರ್ನಿಣಯ ಕೈಗೊಳ್ಳಬಾರದು. 2011ರ ಅಂಕಿ ಅಂಶಗಳನ್ನು ಪರಿಗಣಿಸದೇ ಇತ್ತೀಚಿನ ಕಾಂತರಾಜ ಆಯೋಗ ವರದಿ ಬಹಿರಂಗಪಡಿಸಿ, ಅದರಲ್ಲಿನ ದತ್ತಾಂಶ ಪರಿಗಣಿಸಿ. 51 ಅಲೆಮಾರಿ, ವಿಮುಕ್ತ ಸಮುದಾಯಗಳ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಿ. 101 ಜಾತಿಗಳ ಅಹಲವಾಲು ಆಲಿಸಿ. ಸಮುದಾಯ ಸಂಟನೆಗಳ ಬೇಡಿಕೆಗಳನ್ನು ಪರಿಗಣಿಸುವಂತೆ ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳಾದ ಬಸವರಾಜ ಭೋವಿ, ಪಿ.ಲಕ್ಷ$್ಮ ನಾಯಕ, ಭರತ ನಾಯಕ, ಗಾಳೆಪ್ಪ ಭೋವಿ, ಸತ್ಯಪ್ಪ ಭೋವಿ, ಹುಲಗಪ್ಪ ಬಂಡಿವಡ್ಡರ್, ಲೋಕೇಶ ಭಜಂತ್ರಿ, ಪ್ರವಿಣ ಬಂಡಿವಡ್ಡರ್ ಇತರರಿದ್ದರು.