ಕೊಪ್ಪಳ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಶಾಖೆ ರಾಜ್ಯಕ್ಕೆ ಮಾದರಿ ಎಂದು ಸಂಸ್ಥೆಯ ರಾಜ್ಯ ಸಭಾಪತಿ ವಿಜಯಕುಮಾರ ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎರಡು ವರ್ಷಗಳ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ರಾಜ್ಯದ ಬೇರೆ ಶಾಖೆಗಳಿಗಿಂತ ಕೊಪ್ಪಳ ಶಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೇವಲ ರಕ್ತ ನಿಧಿ ಅಷ್ಟೇ ಅಲ್ಲದೆ, ಸಮಾಜಿಮುಖಿ ಕೆಲಸವನ್ನು ಮಾಡುತ್ತಿದ್ದೇವೆ. ಪ್ರವಾಹ, ವಿಪತ್ತು ಎದುರಾದಾಗಲೂ ಸಂಸ್ಥೆ ನೆರವಾಗುತ್ತಿದೆ. ಕೊಪ್ಪಳ ಶಾಖೆಗೆ ರಾಜ್ಯ ಶಾಖೆ ಸದಾ ಸಹಕಾರ ನೀಡಲಿದೆ. ವೆಂಟಿಲೇಟರ್ ಆ್ಯಂಬುಲೆನ್ಸ್ ನೀಡಲಾಗುವುದೆಂದರು.
ಕೊಪ್ಪಳ ಶಾಖೆ ಅಧ್ಯಕ್ಷ, ಡಿಸಿ ನಲಿನ್ ಅತುಲ್ ಮಾತನಾಡಿ, ಈಗಿರುವ ತಂಡ ಉತ್ತಮ ಕೆಲಸ ಮಾಡುತ್ತಿದೆ. ರೆಡ್ಕ್ರಾಸ್ ಭವನ ನಿರ್ಮಾಣವಾಗುತ್ತಿದ್ದು ಶ್ರೀ ಉದ್ಘಾಟನೆ ಆಗಲಿದೆ. ಚರ್ಮ, ದೇಹ ಸೇರಿ ತುರ್ತು ಅಗತ್ಯಗಳ ಬ್ಯಾಂಕ್ ಮಾಡಲಾಗುವುದು ಎಂದರು. ಈಗಿರುವ ನಿರ್ದೇಶಕರನ್ನೇ ಮುಂದುವರಿಸುವ ಪ್ರಸ್ತಾಪ ಮಂಡಿಸಿ ಅನುಮೋದನೆ ಪಡೆದರು.
ರಕ್ತದಾನಿಗಳು, ರಕ್ತದಾನ ಶಿಬಿರ ಮಾಡಿದವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಶಾಖೆ ಸಭಾಪತಿ ಸೋಮರಡ್ಡಿ ಅಳವಂಡಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಶ್ರೀನಿವಾಸ ಹ್ಯಾಟಿ ವರದಿ ವಾಚಿಸಿದರು. ಸುಧೀರ ಅವರಾದಿ ಲೆಕ್ಕಪತ್ರ ಒಪ್ಪಿಸಿದರು. ಡಾ.ಚಂದ್ರಶೇಖರ ಕರಮುಡಿ, ಡಾ.ಗವಿಸಿದ್ದನಗೌಡ, ಡಾ.ಶಿವನಗೌಡ, ರಾಜೇಶ ಯಾವಗಲ್, ಡಾ.ಮಂಜುನಾಥ ಸಜ್ಜನ, ಡಾ.ರವಿಕುಮಾರ ದಾನಿ ಇದ್ದರು.