ಕೊಪ್ಪಳದ ಗಣೇಶ ನಗರದಲ್ಲಿ ಮನೆಗಳಿಗೆ ನುಗ್ಗಿದ ನೀರು. 
ಜಿಲ್ಲೆ

ಮನೆಗಳಿಗೆ ನುಗ್ಗಿದ ಮಳೆ ನೀರು

Kopala - Raveendra V K

ಕೊಪ್ಪಳ: ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ತರಡಾತ್ರಿ ಉತ್ತಮ ಮಳೆಯಾಗಿದೆ. ಕೊಪ್ಪಳ ನಗರದ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಪೂರ್ವ ಮುಂಗಾರು ಮಳೆಗಳು ಉತ್ತಮವಾಗಿದ್ದು, ಮುಂಗಾರು ಉತ್ತಮ ಆರಂಭ ಲಕ್ಷಣ ಮೂಡಿಸಿದೆ. ಭಾನುವಾರ ಬಹುತೇಕ ಕಡೆ ವರುಣ ಅಬ್ಬರಿಸಿದ್ದಾನೆ. ಜಮೀನುಗಳೆಲ್ಲ ಜಲಾವೃತವಾಗಿವೆ. ಇದರಿಂದ ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಲಿದೆ. ಗ್ರಾಮೀಣ ಭಾಗದಲ್ಲಿ ಹಳ್ಳ, ನಾಲೆಗಳು ನೀರು ಕಾಣುವಂತಾಗಿದೆ. ಮುದ್ದಾಬಳ್ಳಿ ಹಳ್ಳ ತುಂಬಿ ಹರಿದಿದೆ. ಕೊಪ್ಪಳದ ಹಿರೇಹಳ್ಳಕ್ಕೂ ನೀರು ಹೆಚ್ಚಿದೆ. ಕೊಪ್ಪಳ ನಗರದ ಗಣೇಶ ನಗರ ಸೇರಿ ಇತರ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಗಳು ಭರ್ತಿಯಾಗಿ ಹೆಚ್ಚುವರಿ ನೀರು ರಸ್ತೆ ಹಾಗೂ ಖಾಲಿ ಬಡಾವಣೆಗಳಲ್ಲಿ ಹರಿದಿದೆ. ಕೆಲ ಮನೆಗಳಿಗೆ ನೀರು ಹೊಕ್ಕಿದ್ದು, ನಿವಾಸಿಗಳು ನೀರು ಹೊರಹಾಕುವಂತಾಯಿತು.

ರಸ್ತೆಗಳು ಹದಗೆಟ್ಟಿದ್ದು ಮಳೆಯಾಗಿದ್ದರಿಂದ ಕೆಸರು ನಿಲ್ಲುವಂತಾಗಿದೆ. ತಗ್ಗುಗಳಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡುವಂತಾಯಿತು. ನೀರಿನೊಂದಿಗೆ ಹರಿದು ಬಂದ ಕಸ ಮನೆ ಮುಂದೆ ಸಂಗ್ರಹವಾಗಿದ್ದು, ನಿವಾಸಿಗಳೇ ಸ್ವಚ್ಛ ಮಾಡಿ ನೀರು ಮುಂದೆ ಹರಿಯುವಂತೆ ಮಾಡಿದ್ದು ಕಂಡುಬಂತು.