ಜಿಲ್ಲೆ

ಕೊಪ್ಪಳದಲ್ಲಿ ತಂಪೆರೆದ ವರುಣ

Kopala - Raveendra V K

ಕೊಪ್ಪಳ: ಬೇಸಿಗೆ ಹಿನ್ನೆಲೆ ಕಾದು ಕೆಂಡದಂತಾಗಿದ್ದ ಇಳೆಗೆ ಗುರುವಾರ ವರುಣ ತಂಪೆರೆದಿದ್ದಾನೆ. ನಗರ ಸೇರಿ ಗ್ರಾಮೀಣ ಭಾಗದಲ್ಲಿ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು ತಂಪಾದ ವಾತಾವರಣ ನಿರ್ಮಾಣವಾಗಿದೆ.

ಪೂರ್ವ ಮುಂಗಾರು ಮಳೆಗಳು ಆರಂಭವಾಗಿದ್ದು, ಹವಾಮಾನ ಇಲಾಖೆ ವರದಿಯಂತೆ ಸಂಜೆ ಮೋಡ ಕವಿಯಿತು. ಸಂಜೆ 4.30 ಗಂಟೆ ಸುಮಾರಿಗೆ ಆರಂಭವಾದ ಮಳೆ ಗುಡುಗು, ಮಿಂಚಿನೊಂದಿಗೆ ಆರ್ಭಟಿಸಿತು. ಕೆಲ ನಿಮಿಷ ಆಲಿಕಲ್ಲುಗಳು ಸುರಿದವು.

ಬಿಸಿಲಿನಿಂದ ಕಾದಿದ್ದ ಭೂಮಿ ತಂಪಾಯಿತು. ರಸ್ತೆಗಳೆಲ್ಲ ಮಳೆ ನೀರಿನಿಂದು ತುಂಬಿಕೊಂಡವು. ಚರಂಡಿಗಳೂ ತುಂಬಿ ಹರಿದವು. ಕೊಪ್ಪಳ ನಗರ ಸೇರಿ ತಾಲೂಕಿನ ಭಾಗ್ಯನಗರ, ಯತ್ನಟ್ಟಿ, ಗಿಣಿಗೇರಾ, ಹಾಲವರ್ತಿ ಇನ್ನಿತರ ಗ್ರಾಮಗಳಲ್ಲೂ ಮಳೆ ಸುರಿಯಿತು. ಮಳೆಯೊಂದಿಗೆ ಜೋರಾಗಿ ಗಾಳಿ ಬೀಸಿದ್ದು, ರಸ್ತೆ ಬದಿ ಅಂಗಡಿಗಳ ಕೊಡೆಗಳು ಹಾರಿ ಹೋದವು. ಹಣ್ಣು, ಹೂವಿನ ಅಂಗಡಿಗಳೂ ಅಸ್ತವ್ಯಸ್ತವಾದವು.