ಜಿಲ್ಲೆ

ರೈಲ್ವೇ ಸೇತುವೆ 63 ಬೇಗ ನಿರ್ಮಿಸಿ

Kopala - Raveendra V K

ಕೊಪ್ಪಳ: ನಗರದ ರೈಲ್ವೆ ಸೇತುವೆ 63 ಕಾಮಗಾರಿ ಆರಂಭಿಸಿ ತಿಂಗಳೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಜುಲೈ ತಿಂಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಗೇಟ್​ ನಂ.63 ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ನಾಯಕ ತಿಳಿಸಿದರು.

2017ರಲ್ಲೇ ಸೇತುವೆ ಮಂಜೂರಾಗಿ ಅನುದಾನ ಬಿಡುಗಡೆಯಾಗಿದೆ. ಆದರೆ, ಈವರೆಗೂ ಅನುಷ್ಠಾನ ಮಾಡಿಲ್ಲ. ಸೇತುವೆ ಆಗದ ಕಾರಣ ವಿದ್ಯಾರ್ಥಿಗಳು, ವೃದ್ಧರು, ಸಾಮಾನ್ಯ ಜನರ ಓಡಾಟಕ್ಕೆ ತೀವ್ರ ಸಮಸ್ಯೆ ಆಗಿದೆ. ಭೂಸ್ವಾಧಿನಕ್ಕೆ ಅನುದಾನ ನೀಡಿದ್ದು ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕು. ಈಗಾಗಲೇ ಹಳಿ ಕೆಳ ಭಾಗದಲ್ಲಿ ಅಳವಡಿಸುವ ಬಾಕ್ಸ್​ಗಳು ಸಿದ್ಧಗೊಂಡಿವೆ. ಹೊಂದಿಸಿಟ್ಟಿದ್ದು, ಬಾಕಿ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ನಿರ್ಮಿಸಬೇಕಿದೆ. ಇದರಿಂದ ಸಾಕಷ್ಟು ಅನುಕೂಲ ಆಗಲಿದೆ. ಆದರೆ, ವಿನಾ ಕಾರಣ ವಿಳಂಬ ನೀತಿ ಅನುಸರಿಸುತ್ತಿರುವುದು ಜನರ ಸಹನೆ ಮೀರುವಂತೆ ಮಾಡಿದೆ ಎಂದು ಅಳಲು ತೋಡಿಕೊಂಡರು.

ಸಮಸ್ಯೆ ಬಗ್ಗೆ ರೈಲ್ವೆ ಅಧಿಕಾರಿಗಳು, ಸಂಸದ, ಶಾಸಕರಿಗೆ ಹಲವು ಬಾರಿ ಗಮನಕ್ಕೆ ತಂದಿದ್ದೇವೆ. ಎಲ್ಲ ಸಿದ್ಧವಾಗಿದ್ದು ಕಾಮಗಾರಿ ಆರಂಭವಾಗಬೇಕಿದೆ ಎಂದು ತಿಳಿಸಿದ್ದಾರೆ. ಸದ್ಯ ಜೂನ್​ ತಿಂಗಳೊಳಗೆ ಸೇತುವೆ ಓಡಾಟಕ್ಕೆ ಮುಕ್ತವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿವರೆಗೂ ಕಾದು ನೋಡುತ್ತೇವೆ. ಇಲ್ಲದಿದ್ದರೆ ಜುಲೈ ಮೊದಲ ವಾರದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಮಾಹಿತಿ ನೀಡಿದರು. ಉಪಾಧ್ಯಕ್ಷ ಎಸ್​.ಜಿ.ಹೊಸಭಾವಿ, ನಿವಾಸಿಗಳಾದ ಸೋಮನಗೌಡ ಪೊಲೀಸ್​ ಪಾಟೀಲ್​, ದುರುಗೇಶಪ್ಪ ಉರಿಗೆಜ್ಜಿ, ಆರ್​.ಎಸ್​.ಇನಾಮತಿ, ಪಪಂ ಸದಸ್ಯ ರೋಷನ್​ ಅಲಿ ಮಂಗಳೂರು ಇತರರಿದ್ದರು.