ಜಿಲ್ಲೆ

ಜನಸಂಖ್ಯೆ ನಿಯಂತ್ರಣಕ್ಕೆ ಕೈ ಜೋಡಿಸಿ, ಡಿಎಚ್​ಒ ಡಾ.ಟಿ.ಲಿಂಗರಾಜು ಮನವಿ

Kopala - Raveendra V K

ಕೊಪ್ಪಳ: ವಿಶ್ವದಲ್ಲಿ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಲಿಂಗರಾಜು ಮನವಿ ಮಾಡಿದರು.

ತಾಲೂಕಿನ ಕಿನ್ನಾಳದಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ನಿಯಂತ್ರಣ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಸಂಖ್ಯೆ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಜನಸಂಖ್ಯೆ ಸ್ಫೋಟದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಾವೆಲ್ಲ ಅರಿಯಬೇಕು. ಕುಟುಂಬ ಕಲ್ಯಾಣ ಯೋಜನೆಯ ಪ್ರಾಮುಖ್ಯತೆ, ಲಿಂಗಸಮಾನತೆ, ಬಡತನ, ತಾಯಿಯ ಆರೋಗ್ಯ ಮತ್ತು ಮಾನವನ ಹಕ್ಕುಗಳ ರಕ್ಷಣೆ ಬಗ್ಗೆ ತಿಳಿಯಬೇಕು. ಇದರಿಂದ ಕುಟುಂಬ ಹಂತದಲ್ಲೇ ನಾವು ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಸಹಾಯವಾಗಲಿದೆ. ಆರೋಗ್ಯ ಇಲಾಖೆ ಮಾತ್ರ ಅರಿವು ಮೂಡಿಸಿದರೆ ಸಾಲದು. ಎಲ್ಲರೂ ಜಾಗೃತಿ ಮೂಡಿಸಬೇಕು. ವಿದ್ಯಾವಂತರು ಮನೆಯವರಿಗೆ ತಿಳಿವಳಿಕೆ ಮೂಡಿಸಬೇಕು. ಸರ್ಕಾರದೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್​. ಮಾತನಾಡಿ, 1987ರಲ್ಲಿ ವಿಶ್ವದ ಜನಸಂಖ್ಯೆ 500 ಕೋಟಿ ದಾಟಿದ ಪ್ರಯುಕ್ತ ಪ್ರತಿ ವರ್ಷ ಜು.11ರಂದು ವಿಶ್ವ ಜನಸಂಖ್ಯೆ ನಿಯಂತ್ರಣ ದಿನವಾಗಿ ಆಚರಿಸಲಾಗುತ್ತಿದೆ. ಜನಸಂಕ್ಯೆ ಹೆಚ್ಚಿದರೆ ದೇಶದ ಅಭಿವೃದ್ಧಿ ಕುಂಠಿತವಾಗಲಿದೆ. ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮೊದಲ ಗರ್ಭಧಾರಣೆ ಹಾಗೂ ನಂತರದ ಯೋಜಿತ ಗರ್ಭಧಾರಣೆಗೆ ಆರೋಗ್ಯಕರ ದೇಹ, ಮನಸ್ಸು ಮತ್ತು ವಯಸ್ಸು ಅತ್ಯಾವಶ್ಯಕ ಎಂಬುದು ಈ ವರ್ಷದ ಘೋಷವಾಕ್ಯವೆಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ ಮಾತನಾಡಿದರು. ಡಾ.ನಂದಕುಮಾರ, ಡಾ.ಪ್ರಕಾಶ ಎಚ್​., ಡಾ.ಗೋನಾಳು ಕುಮಾರಸ್ವಾಮಿ, ಡಾ.ವೆಂಕಟೇಶ, ಗುರುನಾಥ, ಶಿವಾನಂದ ವಿ.ಪಿ. ಇತರರಿದ್ದರು.