ಜಿಲ್ಲೆ

ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು

ಕೊಪ್ಪಳ: ಕರ್ತವ್ಯದಲ್ಲಿ ತೊಂದರೆ, ಅಡೆ&ತಡೆ, ಕಷ್ಟ ಸಾಮಾನ್ಯ. ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಆತ್ಮತೃಪ್ತಿ ದೊರೆಯುತ್ತದೆ ಎಂದು ನಿವೃತ್ತ ಪೊಲೀಸ್​ ಇನ್ಸ್​ಪೆಕ್ಟರ್​ ವಿರುಪಯ್ಯ ಅಭಿಪ್ರಾಯಪಟ್ಟರು.

ನಗರದ ಪೊಲೀಸ್​ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್​ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಕೆಲಸ ನಾವು ನಿರ್ವಹಿಸಬೇಕು. ಪರಿಪೂರ್ಣವಾಗಿ ಮಾಡಿದ ಯಶ ಸಿಗಲಿದೆ. ಎಲ್ಲ ಕೆಲಸಗಳಲ್ಲಿ ಒತ್ತಡ ಸಹಜ. ಅವುಗಳ ನಡುವೆ ಉತ್ತಮವಾಗಿ ಕೆಲಸ ಮಾಡಬೇಕು, ಬಡವರಿಗೆ ನ್ಯಾಯ ದೊರಕಿಸಿಕೊಡಬೇಕು. ಅನೇಕ ಆಸೆ ಇಟ್ಟುಕೊಂಡು ಸ್ಪರ್ಧಾತ್ಮಕ ಪರೀೆ ಎದುರಿಸಿರುತ್ತೇವೆ. ಕೆಲವೊಮ್ಮೆ ಅನಿವಾರ್ಯವಾಗಿ ಪೊಲೀಸ್​ ವೃತ್ತಿ ಸಿಕ್ಕಿರುತ್ತದೆ. ಪಾಲಿಗೆ ಬಂದ ಹುದ್ದೆ ಪ್ರಾಮಾಣಿಕವಾಗಿ ನಿಭಾಯಿಸಬೇಕು. ಇಲಾಖೆ ಶಿಸ್ತಿಗೆ ಹೆಸರಾಗಿದೆ. 31 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ ಎಂದರು.

ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಮಾತನಾಡಿ, ಸಾರ್ವಜನಿಕರಿಗಾಗಿ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿ, ನಿವೃತ್ತರಾದ ಪೊಲೀಸರನ್ನು ಸನ್ಮಾನಿಸಿ, ಗೌರವಿಸಲಾಗುತ್ತಿದೆ. 1965 ಏ.2ರಂದು ರಾಜ್ಯ ಪೊಲೀಸ್​ ಕಾಯ್ದೆ ಜಾರಿಗೆ ಬಂದಿದೆ. ಇದರ ಸವಿನೆನಪಿಗಾಗಿ ಪೊಲೀಸ್​ ಧ್ವಜ ದಿನಾಚರಣೆ ಮಾಡುತ್ತೇವೆ. ಅವಿಸ್ಮರಿಣಿಯ ಸೇವೆ ಸಲ್ಲಿಸಿ, ನಿವೃತ್ತರಾದವರ ಯೋಗಕ್ಷೇಮ ಮತ್ತು ಕಲ್ಯಾಣಕ್ಕೆ ಕಾರ್ಯಕ್ರಮ ಮಾಡಲಾಗುತ್ತದೆ. ಪೊಲೀಸ್​ ಧ್ವಜ ಮಾರಾಟ ಮಾಡಿ, ಸಂಗ್ರಹಿಸಿದ ಹಣವನ್ನು ನಿವೃತ್ತ ಪೊಲೀಸರ ಆರೋಗ್ಯ ಸೇರಿ ವಿವಿಧ ಕಲ್ಯಾಣ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ತಿಳಿಸಿದರು.

ನಿವೃತ್ತ ಪೊಲೀಸರನ್ನು ಸನ್ಮಾನಿಸಲಾಯಿತು. ಪೊಲೀಸ್​ ತಂಡಗಳು ಪಥ ಸಂಚಲನ ನಡೆಸಿ ಗೌರವ ವಂದನೆ ಸಲ್ಲಿಸಿದವು. ಎಎಸ್ಪಿ ಹೇಮಂತ್​ ಕುಮಾರ್​, ಡಿವೈಎಸ್ಪಿಗಳಾದ ಮುತ್ತಣ್ಣ ಸರವಗೋಳ, ಸಿದ್ದಲಿಂಗಪ್ಪಗೌಡ ಪಾಟೀಲ್​ ಇದ್ದರು.