ಕೊಪ್ಪಳ: ದೇಶದಲ್ಲಿ ಶಾಂತಿ&ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕೊಡುಗೆ ಅಪಾರ. ಜನತೆಗೆ ಎಲ್ಲ ಸಮಯದಲ್ಲೂ ಅಗತ್ಯ ರಕ್ಷಣೆ ನೀಡಿ ನಮ್ಮ ರಕ್ಷಕರಾಗಿದ್ದಾರೆಂದು ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಪ್ರಶಂಸಿಸಿದರು.
ನಗರದ ಜಿಲ್ಲಾ ಪೊಲೀಶ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೈನಿಕರು ಗಡಿಯಲ್ಲಿ ನಿಂತು ದೇಶ ರಸಿದರೆ, ಪೊಲೀಸರು ಆಂತರಿಕ ರಕ್ಷಕರಾಗಿದ್ದಾರೆ. ಪ್ರವಾಹ, ವಿಪತ್ತು ಸೇರಿ ಇನ್ನಿತರ ತುರ್ತು ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ದೇಶ ರಸುತ್ತಾರೆ. ಅವರ ಕುಟುಂಬ ಸದಸ್ಯರ ಸಹಕಾರವನ್ನೂ ನಾವು ನೆನೆಯಬೇಕು. ತಮ್ಮ ಮನೆ ಕೆಲಸ ಬಿಟ್ಟು ಸಮಾಜ ಸೇವೆಗೆ ತಮ್ಮವರನ್ನು ಕಳಿಸಿಕೊಡುತ್ತಾರೆ. ಕರ್ತವ್ಯದಲ್ಲಿ ಹುತಾತ್ಮರಾದ ಪೊಲೀಸರ ಕುಟುಂಬಗಳಿಗೆ ನಾವು ಧೈರ್ಯ ತುಂಬಬೇಕು ಎಂದರು.
ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಮಾತನಾಡಿ, 1957ರ ಅ.21ರಂದು ಸಿಆರ್ಪಿಎಫ್ನ ಒಂದು ಪೋಲಿಸ್ ಪಡೆ ಡಿಎಸ್ಪಿ ಕರಣ್ಸಿಂಗ್ ನೇತೃತ್ವದಲ್ಲಿ ಭಾರತ-&ಚೀನಾ ಗಡಿಭಾಗದಲ್ಲಿ ಗಸ್ತು ಮಾಡುತ್ತಿತ್ತು. ಆಗ ಚೀನಾ ಸೈನಿಕರು ಗಡಿ ಅತಿಕ್ರಮಣ ಮಾಡಿದರು. ಅವರು ಆಧುನಿಕ ಶಸ್ತ್ರಾಸ್ತ್ರ ಹೊಂದಿದ್ದರೆ ನಮ್ಮವರ ಬಳಿ ಕೆಲವೇ ಶಸ್ತ್ರಾಸ್ತ್ರಗಳಿದ್ದವು. ಛಲದಿಂದ ಹೋರಾಡಿದ 10 ಪೊಲೀಸರು ಹುತಾತ್ಮರಾದರು. ಉಳಿದವರನ್ನು ಚೀನಾ ಸೈನಿಕರು ಬಂಧಿಸಿದರು. ದೇಶಕ್ಕಾಗಿ ಪ್ರಾಣ ನೀಡಿದ ಪೊಲೀಸರ ನೆನಪಿಗಾಗಿ ಸ್ಮಾರಕ ನಿರ್ಮಿಸಿದ್ದು, ಈ ದಿನವನ್ನು ಕರ್ತವ್ಯದಲ್ಲಿ ಹುತಾತ್ಮರಾದ ಪೊಲೀಸರ ದಿನ ಆಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಹುತಾತ್ಮ ಪೊಲೀಸರ ಕುಟುಂಬದವರನ್ನು ಸನ್ಮಾನಿಸಲಾಯಿತು. ಗಣ್ಯರು ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು. ಎಎಸ್ಪಿ ಹೇಮಂತ್ ಕುಮಾರ್, ಡಿವೈಎಸ್ಪಿಗಳು, ಪಿಐಗಳು, ಪಿಎಸ್ಐ ಹಾಗೂ ಇತರ ಸಿಬ್ಬಂದಿ ಇದ್ದರು.