ಕೊಪ್ಪಳ: ಹಳೆಯ ಸಾಹಿತ್ಯಿಕ ಪ್ರಾಕಾರಗಳ ಜತೆಗೆ ಹೊಸ ಸಾಹಿತ್ಯವನ್ನೂ ಅಳವಡಿಸಿಕೊಂಡು ಬರವಣಿಗೆಯಲ್ಲಿ ತೊಡಗಬೇಕೆಂದು ಬರಹಗಾರ ವಿಜಯ ಅಮೃತರಾಜ್ ಹೇಳಿದರು.
ಯುಗಾದಿ ಹಾಗೂ ರಂಜಾನ್ ಹಬ್ಬ ಅಂಗವಾಗಿ ಕವಿ ಸಮೂಹ ಕೊಪ್ಪಳ, ಬಹುತ್ವ ಭಾರತ ಬಳಗದಿಂದ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಕವಿತೆ ಹೊಸತನದಿಂದ ಕೂಡಿರಬೇಕು. ಜಾನಪದ ಬದುಕು, ಪರಂಪರೆ ಒಳಗೊಂಡಿರಲಿ. ಅದನ್ನು ಉಳಿಸುವ ಕೆಲಸ ಮಾಡೋಣ. ಕನ್ನಡದಲ್ಲಿ ವಿಟ್ ಪ್ರಕಾರ ಇದುವರೆಗೆ ಬಂದಿಲ್ಲ. ಕೌಬಾಯ್ ಪದ್ಯಗಳು ಬರೆಯುವ ಪ್ರಯತ್ನ ನಡೆಯಬೇಕು. ಸಾಹಿತ್ಯದ ಬಗ್ಗೆ ನಿರಂತರ ಚರ್ಚೆಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕವಿಗಳಾದ ಅರುಣಾ ನರೇಂದ್ರ ರಂಜಾನ್ ಹಾಗೂ ಯುಗಾದಿ ಕುರಿತ ಕವಿತೆ ವಾಚಿಸಿದರು. ಪುಷ್ಪಲತಾ ಏಳುಭಾವಿ- ನನ್ನ ಕೊಂದುಬಿಡು ಹಾಗೂ ಅಂದು ಮತ್ತು ಇಂದು, ಶ್ರೀನಿವಾಸ್ ಚಿತ್ರಗಾರ್ -ಡುಬ್ಬ ಚಪ್ಪರಿಸುವವರು ಹಾಗೂ ಕಟ್ಟ ಕಡೆಯ ಹಾದಿ, ಜಿ.ಎಸ್. ಗೋನಾಳ್ ಶಾಂತಿ ಪ್ರೀತಿ ಸೌಹಾರ್ದತೆ ರಂಜಾನ್ ಮತ್ತು ಯುಗಾದಿ, ವಿಜಯ ಅಮೃತರಾಜ್-- ಯುಗಾದಿ ಹಾಗೂ ರಂಜಾನ್, ಪಿ.ಎಸ್.ಅಮರದೀಪ ಬೇವು ಬೆಲ್ಲ , ಖಾಲಿ ಬಿಳಿಹಾಳೆ, ಬಿ.ಎಸ್.ವೀರಾಪುರ - ಕೊಪ್ಪಳ ಉಳಿಸೋಣ ಬನ್ನಿ, ಯುಗಾದಿ ಹರುಷ ತರಲಿ, ಬೀರಪ್ಪ ಅಂಡಗಿ ಕಿವಿ , ಅನಸೂಯ ಜಹಗೀರದಾರ್- ಅಳಲಾರದ ಮಕ್ಕಳು ಹಾಗೂ ಯುಗಾದಿ ಚೈತ್ರಳ ಸ್ವಗತ ಕವಿತೆ, ಸಿರಾಜ್ ಬಿಸರಳ್ಳಿ - ದ್ವಿಪದಿಗಳು , ನನಗೆ ನಿನ್ನ ದರ್ಶನ ಭಾಗ್ಯವಿಲ್ಲ ಎನ್ನುವ ಕವಿತೆ ವಾಚಿಸಿದರು.
ಮೌಲಾ ಹುಸೈನ್ ತಳಕಲ್, ಮಂಜು ತೋಟಗಾರ , ನರೇಂದ್ರ ಪಾಟೀಲ್ ಇತರರಿದ್ದರು.