ಜಿಲ್ಲೆ

ಅತ್ಯಾಚಾರಿಗೆ 20 ವರ್ಷ ಜೈಲು ಶಿಕ್ಷೆ

Kopala - Raveendra V K

ಕೊಪ್ಪಳ: ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) ಆ.5ರಂದು ಆದೇಶಿಸಿದೆ.

ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಆಟೋ ಚಾಲಕ ಧನಂಜಯ ಮಠದ ಶಿೆಗೆ ಗುರಿಯಾದಾತ.

ಆಟೋ ಚಾಲನೆ ವೃತ್ತಿ ಮಾಡುತ್ತಲೇ ಬಾಲಕಿಯನ್ನು ಪರಿಚಯಿಸಿಕೊಂಡ ಧನಂಜಯ, ಪ್ರೀತಿಸುವುದಾಗಿ ಪುಸಲಾಯಿಸಿದ್ದ. 2023ರ ಜೂನ್​ 30ರಂದು ಕೊಪ್ಪಳದಿಂದ ಬಾಲಕಿಯನ್ನು ಮರಿಯಮ್ಮನಹಳ್ಳಿಗೆ ಕರೆದೊಯ್ದಿದ್ದ. ಲಲಿತಮ್ಮ ಎಂಬುವವರ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಕೊಪ್ಪಳ ಮಹಿಳಾ ಠಾಣೆಯಲ್ಲಿ ಎಚ್​.ಸಿ. ನಾಗರಾಜ ದೂರು ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದ್ದರು.

ಪಿಎಸ್​ಐ ನಾಗಲಿಂಗಯ್ಯ, ಪಿಐ ಸಂತೋಷ ಹಳ್ಳೂರ ಪೂರ್ಣ ತನಿಖೆ ನಡೆಸಿದ್ದು, ಮಹಿಳಾ ಠಾಣೆ ಪಿಐ ಆಂಜನೇಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಧನಂಜಯ ದೋಷಿ ಎಂದು ಪರಿಗಣಿಸಿದೆ. 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಕುಮಾರ ಡಿ.ಕೆ.ಅವರು ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದಾರೆ. ಕೊಪ್ಪಳ ಮಹಿಳಾ ಠಾಣೆ ಸಿಬ್ಬಂದಿ ಪ್ರಕಾಶ ಸಾಗಳನ್ನು ಹಾಜರುಪಡಿಸಿ ಸಹಕರಿಸಿದ್ದಾರೆಂದು ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.