ಕೊಪ್ಪಳ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಬಿ.ಕೃಷ್ಣಪ್ಪ ಬಣ)ಯಿಂದ ಬಳ್ಳಾರಿಯಲ್ಲಿ ಆ.8ರಂದು ರಾಜ್ಯಮಟ್ಟದ ಸ್ವಾಭಿಮಾನಿ ಸಂಘರ್ಷ ಚೈತನ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ ಕೆರೆಹಳ್ಳಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜನ್ಮ ದಿನಾಚರಣೆ ಅಂಗವಾಗಿ ಸಮಾವೇಶ ಆಯೋಜಿಸಲಾಗಿದೆ. ಬಳ್ಳಾರಿಯ ಬುಡಾ ಕಾಂಪ್ಲೆಕ್ಸ್ ಹತ್ತಿರದ ಮೋತಿ ಸರ್ಕಲ್ನ ಕೆ.ಇ.ಬಿ ಪಂಕ್ಷನ್ ಹಾಲ್ನಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ ಎಂದರು.
70ರ ದಶಕದಲ್ಲಿ ರಾಜ್ಯದಲ್ಲಿ ದಲಿತರ ಮೇಲೆ ಶೋಷಣೆ ಹೆಚ್ಚಿತ್ತು. ಅಂಬೇಡ್ಕರ್ ಚಿಂತನೆಯಲ್ಲಿ ಪ್ರೊ.ಬಿ.ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದರು. ಹಲವು ಹೋರಾಟಗಳ ಮೂಲಕ ಸಮುದಾಯಕ್ಕೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಡಿದರು. ರಾಜ್ಯದಲ್ಲಿ 90ರ ದಶಕದಲ್ಲಿ ಬಹುಜನ ಸಮಾಜ ಪಕ್ಷ ಮೂಲಕ ರಾಜಕೀಯ ಪ್ರಜ್ಞೆ ಮೂಡಿಸಿದರು. ಕಾರ್ಯಕರ್ತರಲ್ಲಿ ಸ್ವಾಭಿಮಾನದ ಚೈತನ್ಯ ತುಂಬಿ ಶಾಸಕರನ್ನಾಗಿ ಮಾಡಿ ಯಶಸ್ವಿಯಾದರು. ತಮ್ಮ ಇಡೀ ಜೀವನವನ್ನೇ ಚಳವಳಿಗಾಗಿ ಮೀಸಲಿಟ್ಟರು. ಅವರ ಜನ್ಮದಿನ ವಿಶೇಷವಾಗಿ ಆಚರಿಸುತ್ತಿದ್ದು ಜಿಲ್ಲೆಯಿಂದ 500ಕ್ಕೂ ಹೆಚ್ಚು ಜನ ತೆರಳಲಿದ್ದೇವೆಂದು ಮಾಹಿತಿ ನೀಡಿದರು.
ಸಂಚಾಲಕರಾದ ಮಾರ್ಕಂಡೆಪ್ಪ ಹಲಗಿ, ಗವಿಸಿದ್ದಪ್ಪ ಕುಣಿಕೇರಿ, ಸಂಜಯ್ ದಾಸರ್, ಶಿವು ಬೇಳೂರು, ಅಂದಪ್ಪ ಹಡಪದ, ಲಲಿತಾ, ಬಸಮ್ಮ ಸಂಗನಾಳ, ಮಂಜುನಾಥ ನಡುವಮನಿ, ವಕೀಲ ರಮೇಶ ಇದ್ದರು.