ಕೊಪ್ಪಳ: ನರೇಗಾದಡಿ ಕೆಲಸ ಮಾಡುವ ಸಿಬ್ಬಂದಿಗೆ 5 ತಿಂಗಳ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂದ ಪದಾಧಿಕಾರಿಗಳು ಗುರುವಾರ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯಗೆ ಮನವಿ ಸಲ್ಲಿಸಿದರು.
ಜಿಪಂ, ತಾಪಂ ಹಾಗೂ ಗ್ರಾಪಂ ಮಟ್ಟದಲ್ಲಿ ನಾವೆಲ್ಲ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಎಡಿಪಿಸಿ, ಡಿಐಇಸಿ, ಡಿಎಂಐಎಸ್, ಅಕೌಂಟ್ ಮ್ಯಾನೆಜರ್, ತಾಂತ್ರಿಕ ಸಂಯೋಜಕರು, ಎಂ.ಐ.ಎಸ್. ಸಂಯೋಜಕರು, ಐ.ಇ.ಸಿ. ಸಂಯೋಜಕರು, ಆಡಳಿತ ಸಹಾಯಕರು, ಡಿಇಓಗಳು, ತಾಂತ್ರಿಕ ಸಹಾಯಕರಿದ್ದೇವೆ. ಕಳೆದ ಜನೆವರಿಯಿಂದ ವೇತನ ಬಂದಿಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಶಾಲೆ ಆರಂಭವಾಗುತ್ತಿದ್ದು ಮಕ್ಕಳ ಶಾಲಾ ಶುಲ್ಕ ಭರಿಸಲು ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಕೂಡಲೇ ಇಲಾಖೆ ಮೇಲಧಿಕಾರಿಗಳ ಗಮನ ಸೆಳೆಯಬೇಕು. ಬಾಕಿ ವೇತನ ಬಿಡುಡಗೆಗೆ ಕ್ರಮವಹಿಸಬೇಕು. ಸಮಸ್ಯೆ ಇತ್ಯರ್ಥಪಡಿಸಬೇಕು. ಸಂಕಷ್ಟದಿಂದ ತಮ್ಮನ್ನು ಪಾರು ಮಾಡಬೇಕೆಂದು ಒತ್ತಾಯಿಸಿದರು. ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಕೊಟ್ರೇಶ ಜವಳಿ, ಉಪಾಧ್ಯಕ್ಷ ಶರಣಯ್ಯ, ಕನಕಪ್ಪ ಚಲವಾದಿ ಇತರರಿದ್ದರು.