ಕೊಪ್ಪಳ: ಹಜರತ್ ಸದರ್ ಶಾಹವಲಿ ದರ್ಗಾ ಸೇವಾ ಸಮಿತಿಯಿಂದ ಕೊಪ್ಪಳದ ತೆಗ್ಗಿನಕೇರಾ ಓಣಿಯ ಅಬುಬಕರ್ ಮಸೀದಿ ಬಳಿ ಏ.20ರಂದು ಬೆಳಗ್ಗೆ 9ರಿಂದ ಉಚಿತ ಖತ್ನಾ ಶಿಬಿರ ಆಯೋಜಿಸಲಾಗಿದೆ ಎಂದು ಹಜರತ್ ಸದರ್ ಶಾಹವಲಿ ದರ್ಗಾ ಸೇವಾ ಸಮಿತಿ ಸಂಘಟಕ ಸೈಯದ್ ಯಾಖೂಬ್ ಹುಸೇನಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಖತ್ನಾ ಕಾರ್ಯ ಬಳಿಕ ಲುಂಗಿ, ಟೋಪಿ ಸೇರಿ ಇತರ ವಸ್ತುಗಳ ಕಿಟ್ ನೀಡಲಾಗುವುದು. ಸಮಸ್ಯೆಗಳಾದಲ್ಲಿ ವೈದ್ಯರು ಮನೆಗೆ ತೆರಳಿ ಚಿಕಿತ್ಸೆ ನೀಡುವರು. ಈಗಾಗಲೇ 50-60 ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ವೈದ್ಯ ಹಸನ್ ಅಲಿ ನಿಂಗಾಪುರ ಶಿಬಿರ ನಡೆಸುವರು. ಸಮಿತಿಯಿಂದ ಕಳೆದ 26 ವರ್ಷಗಳಿಂದ ಶಿಬಿರ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಸೈಯ್ಯದ್ ಹಯಾತ್ ಪೀರಾ ಹುಸೇನಿ ಇದ್ದರು.