ಜಿಲ್ಲೆ

ಗಂಡನನ್ನು ಕೊಂದು ಧರ್ಮಸ್ಥಳಕ್ಕೆ ಹೋಗಿದ್ದಾನೆಂದ ಪತ್ನಿ

Kopala - Raveendra V K

ಕೊಪ್ಪಳ: ತಾಲೂಕಿನ ಕೂಕನಪಳ್ಳಿ ಗ್ರಾಮ ಸಮೀಪ ಅರೆಸುಟ್ಟ ಭಂಗಿಯಲ್ಲಿ ದೊರೆತಿದ್ದ ಅಪರಿಚಿತ ಶವ ಪ್ರಕರಣ ಕೊಲೆ ಎಂದು ದೃಢಪಟ್ಟಿದೆ. ಪತ್ನಿಯೇ ಪ್ರಿಯಕರನೊಡನೆ ಸೇರಿ ಪತಿಯನ್ನು ಕೊಂದಿದ್ದಾಳೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮ ನಿವಾಸಿ ದ್ಯಾಮಣ್ಣ ವಜ್ರಬಂಡಿ (40) ಕೊಲೆಯಾದಾತ. ಈತನ ಪತ್ನಿ ನೇತ್ರಾವತಿ ಹಾಗೂ ಈಕೆಯ ಪ್ರಿಯಕರ ಕೊಪ್ಪಳ ತಾಲೂಕಿನ ಕಾಮನೂರು ಗ್ರಾಮದ ಲಾರಿ ಚಾಲಕ ಸೋಮಪ್ಪ ಕುರುಬಡಗಿ ಬಂಧಿತರು. ಇಬ್ಬರ ನಡುವೆ ಅಕ್ರಮ ಸಂಬಂಧವಿದೆ. ದ್ಯಾಮಣ್ಣ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ವಿಷಯವನ್ನು ಸೋಮಪ್ಪನಿಗೆ ತಿಳಿಸಿದ್ದಳು. ಸೋಮಪ್ಪನೂ ದ್ಯಾಮಣ್ಣನಿಗೆ ಪರಿಚಿತ. ಕೆಲ ದಿನಗಳ ಹಿಂದೆ ಹೊಲದಲ್ಲಿ ಕೊಲೆಗೆ ಯತ್ನಿಸಿ ವಿಲಗೊಂಡಿದ್ದರು. ಈ ವಿಷಯ ದ್ಯಾಮಣ್ಣನ ಗಮನಕ್ಕೆ ಬಂದಿರಲಿಲ್ಲ.

ಜುಲೈ 25ರಂದು ಪೋನ್​ ಮಾಡಿ ಜಮೀನಿಗೆ ದ್ಯಾಮಣ್ಣನನ್ನು ಕರೆಸಿಕೊಂಡಿದ್ದಾರೆ. ಬಳಿಕ ತಲೆ ಸೇರಿ ಇತರೆಡೆ ರಾಡ್​ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿಕ ಚೀಲದಲ್ಲಿ ಹಾಕಿಕೊಂಡು ದ್ಯಾಮಣ್ಣನ ಯೂನಿಕಾರ್ನ್​ ಬೈಕ್​ನಲ್ಲೇ ಶವ ಕೊಂಡೊಯ್ದ ಸೋಮಪ್ಪ ಕೂಕನಪಳ್ಳಿ ಬಳಿ ಜಾಲಿ ಪೊದೆ ನಡುವೆ ಬೆಂಕಿಹಚ್ಚಿ ಸುಡುಲು ಯತ್ನಿಸಿದ್ದಾನೆ. ಅರೆಬರೆ ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಅಪರಿಚಿತ ಶವವನ್ನು ಪೊಲೀಸರು ನಿಯಮಾನುಸಾರ ವಿಲೇವಾರಿಗೊಳಿಸಿದ್ದಾರೆಂದು ಶುಕ್ರವಾರ ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.