ಜಿಲ್ಲೆ

ಖರೀದಿ ಕೇಂದ್ರ ತೆರೆಯಿರಿ, -ಡಾ.ಬಸವರಾಜ ಕ್ಯಾವಟರ್ ಒತ್ತಾಯ

ಕೊಪ್ಪಳ: ಕೂಡಲೇ ಸರ್ಕಾರ ಜಿಲ್ಲಾವಾರು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದು ರೈತರ ಹಿತ ಕಾಯಬೇಕೆಂದು ಬಿಜೆಪಿ ರಾಜ್ಯ ಕಾರಿಣಿ ಸದಸ್ಯ, ವೈದ್ಯ ಬಸವರಾಜ ಕ್ಯಾವಟರ್ ಒತ್ತಾಯಿಸಿದ್ದಾರೆ.

ಮಾರುಕಟ್ಟೆಯಲ್ಲಿ ಏಕಾಏಕಿ ಮೆಕ್ಕೆಜೋಳ ಬೆಲೆ ಇಳಿಕೆಯಾಗಿರುವುದರಿಂದ ಅನ್ನದಾತರು ಅಕ್ಷರಶ ನಲುಗಿದ್ದಾರೆ. ಕ್ವಿಂಟಲ್ಗೆ  1600-1800 ರೂ. ಆಗಿದೆ. ಕೊಪ್ಪಳ ಜಿಲ್ಲೆಯಲ್ಲಿ 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದ ರೈತರು ಚಿಂತಾಕ್ರಾಂತರಾಗಿದ್ದಾರೆ.‌ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗೆ ಮಾರಿದರೇ ಮಾಡಿದ ಖರ್ಚು ಕೂಡ ಬರುವುದಿಲ್ಲ.

ಈ ಬಾರಿ ಯೂರಿಯಾ ರಸಗೊಬ್ಬರ ಅಭಾವ ಸೇರಿ ನಾನಾ ಕಾರಣಗಳಿಂದ ರೈತರು ಪಡಬಾರದ ಯಮಯಾತನೆ ಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಲೆಯೂ ಇಳಿಕೆಯಾಗಿರುವುದು ರೈತರಿಗೆ ಗಾಯದ ಮೇಲೆ ಬರ ಎಳೆದಂತ ಅನುಭವವಾಗುತ್ತಿದೆ.  ಈ ಹಿಂದೆ ಇಂತಹದ್ದೆ ಪರಿಸ್ಥಿತಿ ಎದುರಾಗಿದ್ದಾಗ ನಮ್ಮ ಬಿಜೆಪಿ ಸರಕಾರ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಿತ್ತು.

ಆದರೆ, ಮೆಕ್ಕೆಜೋಳ ಬೆಲೆ ಇಳಿದು, ರೈತರು ಸಂಕಷ್ಟ ಅನುಭವಿಸಲು ಪ್ರಾರಂಭಿಸಿ, 15 ದಿನ ಮೇಲಾದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನೂ ಕಣ್ಣೆತ್ತಿ ನೋಡದಿರುವುದು ನಾಚಿಕೇಡಿತನದ ಸಂಗತಿ. ಹೀಗೆ ಪರಿಸ್ಥಿತಿ ಮುಂದುವರಿಯುವುದು ಸರಿಯಲ್ಲ. ಕೂಡಲೇ ಆಯಾ ಜಿಲ್ಲಾವಾರು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ರೈತರ ಹಿತ ಕಾಯಬೇಕೆಂದು ಒತ್ತಾಯಿಸಿದ್ದಾರೆ.