ಜಿಲ್ಲೆ

ಅಪಘಾತ ಶೂನ್ಯಕ್ಕಿಳಿಸಲು ಕ್ರಮ : ಸಂಸದ ಹಿಟ್ನಾಳ

Kopala - Raveendra V K

ಕೊಪ್ಪಳ: ಜಿಲ್ಲೆಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತ ಶೂನ್ಯಕ್ಕಿಳಿಸಲು ಕ್ರಮ ವಹಿಸಲಾಗುವುದೆಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ತಾಲೂಕಿನ ಹೊಸಳ್ಳಿ&ಹಿಟ್ನಾಳ ನಡುವಿನ ಎನ್​ಎಚ್​ 50ರ ಮೇಲ್ಸೇತುವೆ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಎನ್​ಎಚ್​-50 ಮತ್ತು 63ರಲ್ಲಿ ವಾಹನ ದಟ್ಟಣೆ ಅಧಿಕ. 15 ಕಿ.ಮೀ. ಉದ್ದದಲ್ಲಿ ವರ್ಷಕ್ಕೆ 190 ಅಪಘಾತಗಳು ಸಂಭವಿಸುತ್ತಿವೆ. ಸುಮಾರು 50&60 ಸಾಯುತ್ತಿದ್ದಾರೆ. ಮಾಜಿ ಸಂಸದ ಸಂಗಣ್ಣ ಕರಡಿ ತಮ್ಮ ಅವಧಿಯಲ್ಲಿ 120 ಕೋಟಿ ರೂ. ಅನುದಾನ ತಂದು ನಿಂಗಾಪುರ, ಹೊಸಳ್ಳಿ, ಶಹಪುರ ಹಾಗೂ ಮೆತಗಲ್​ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಒಂದೊಂದಾಗಿ ಪೂರ್ಣಗೊಳಿಸಲಾಗುತ್ತಿದೆ. ಜತೆಗೆ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ವಾಹನಗಳಿಗೆ ವೇಗ ಮಿತಿ ಅಳವಡಿಸಲಾಗುವುದು. ಮೀರಿದವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ಸೇತುವೆ ನಿರ್ಮಾಣದಿಂದ ಅನುಕೂಲವಾಗಿದೆ. ಅ.6ರಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ 1,500 ಕೋಟಿ ರೂ. ಕಾಮಗಾರಿ ಉದ್ಘಾಟಿಸುವರು ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಸೇತುವೆ ಮಂಜೂರಾತಿಗೆ ನನ್ನ ಅವಧಿಯಲ್ಲಿ ಶ್ರಮಿಸಿರುವೆ. ಕುಕನೂರು, ಯಲಬುರ್ಗಾ, ಮಸ್ಕಿ ಮತ್ತು ಸಿಂಧನೂರು ಬೈಪಾಸ್​ ಕಾಮಗಾರಿ ಪ್ರಾರಂಭಿಸಬೇಕು. ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿಮಾರ್ಣಕ್ಕೆ ಆದ್ಯತೆ ನೀಡಬೇಕು. ದರೋಜಿ&-ಗಂಗಾವತಿ ಮತ್ತು ಗಂಗಾವತಿ-&ಬಾಗಲಕೋಟ ರೈಲ್ವೆ ಲೈನ್​ ಪ್ರಾರಂಭಕ್ಕೂ ಸಂಸದರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹೊಸಳ್ಳಿ ಗ್ರಾಪಂ ಅಧ್ಯಕ್ಷ ಸುರೇಶ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಕೊಪ್ಪಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಾಲಚಂದ್ರನ್​, ಮುಖಂಡರಾದ ಗೂಳಪ್ಪ ಹಲಗೇರಿ, ವೀನಗೌಡ ಪಾಟೀಲ್​, ಯಂಕಪ್ಪ, ಕೆ.ಎಂ.ಸೈಯದ್​, ವಿಶ್ವನಾಥ ರಾಜಣ್ಣ, ಗುತ್ತಿಗೆದಾರ ಶರಣಬಸವರಾಜ ಆಲೂರು ಇತರರಿದ್ದರು.