ಕೊಪ್ಪಳ: ಜಿಲ್ಲೆಯ ಗುತ್ತಿಗೆದಾರರು ಕಾಮಗಾರಿಗಳಿಗೆ ಬೇಕಾದ ಸಾಮಗ್ರಿಗಳನ್ನು ತಮ್ಮ ಕಂಪನಿಯಿಂದಲೇ ಪಡೆಯಬೇಕೆಂದು ಸಂಸದ ರಾಜಶೇಖರ ಹಿಟ್ನಾಳ ನಿಯಮ ಮಾಡಿದ್ದಾರೆ. ಕಾಮಗಾರಿಗಳಲ್ಲಿ ಏಕಸ್ವಾಮ್ಯತ್ವ ಸಾಧಿಸಲು ಮುಂದಾಗಿದ್ದು ಗುತ್ತಿಗೆದಾರರಿಗೆ ತೊಂದರೆ ಆಗುತ್ತಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂದ ಅಧ್ಯಕ್ಷ ಸುರೇಶ ಭೂಮರಡ್ಡಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಈ ಮೊದಲು ಕ್ರಶರ್ ಮಾಲೀಕರು ಮತ್ತು ಗುತ್ತಿಗೆದಾರರು ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿದ್ದೆವು. ಎಲ್ಲ ಕಾಮಗಾರಿಗಳು ಸರಾಗವಾಗಿ ನಡೆದಿವೆ. ಸಂಸದ ರಾಜಶೇಖರ ಹಿಟ್ನಾಳ ತಮ್ಮದೇ ಪ್ರೇರಣಾ ಏಜೆನ್ಸಿ ಹೆಸರಿನ ಸಂಸ್ಥೆ ಮಾಡಿಕೊಂಡಿದ್ದಾರೆ. ಎಲ್ಲ ಕ್ರಶರ್ ಮಾಲೀಕರನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಯಾರಿಗೇ ಜಲ್ಲಿ ಕಲ್ಲು, ಎಂಸ್ಯಾಂಡ್ ಇನ್ನಿತರ ಕ್ರಶರ್ ವಸ್ತು ಪಡೆಯಬೇಕೆಂದರೂ ಇವರ ಸಂಸ್ಥೆ ಮೂಲಕವೇ ಪಡೆಯಬೇಕೆಂದು ಷರತ್ತು ವಿಧಿಸಿದ್ದಾರೆ. ಅಲ್ಲದೇ ಮುಂಗಡವಾಗಿ ಹಣ ನೀಡಬೇಕು. ಇವರೇ ದರ ನಿಗದಿಪಡಿಸುತ್ತಾರೆ. ಕಳೆದ ಮೂರು ವರ್ಷದಿಂದ ಸರ್ಕಾರದಿಂದ ಬಿಲ್ ಪಾವತಿಯಾಗುತ್ತಿಲ್ಲ. ಪರ್ಸೆಂಟೇಜ್ ಪ್ರಮಾಣವೂ ಹೆಚ್ಚಿದೆ ಎಂದು ಆರೋಪಿಸಿದರು.
ನಮಗೆ ಬೇಕಾದ ಕ್ರಶರ್ ಮಾಲೀಕರಿಂದ ಸಾಮಗ್ರಿ ಪಡೆಯದಂತೆ ನಿಯಮ ವಿಧಿಸುವುದು ಎಷ್ಟು ಸರಿ ? ಇದು ಏಕಸ್ವಾಮ್ಯತ್ವ ಸಾಧಿಸುವ ಲಕ್ಷಣ. ಎಸ್ಸಿ&ಎಸ್ಟಿ ಗುತ್ತಿಗೆದಾರರಿಗೆ 1 ಕೋಟಿ ರೂ.ವರೆಗಿನ ಕಾಮಗಾರಿಗಳನ್ನು ಮಾಡಲು ಸರ್ಕಾರ ಕಾನೂನುಬದ್ಧಗೊಳಿಸಿದೆ. ಆದರೂ ಪ್ಯಾಕೇಜ್ ಮಾಡಿಕೊಂಡು ದಕ್ಕದಂತೆ ನೋಡಿಕೊಳ್ಳುತ್ತಿದ್ದಾರೆ. ಸಣ್ಣಪುಟ್ಟ ಕಾಮಗಾರಿಗಳನ್ನು ಕೆಆರ್ಐಡಿಎಲ್, ನಿರ್ಮಿತಿಗೆ ನೀಡುತ್ತಿದ್ದಾರೆ. ಇವೆರಡೂ ಏಜೆನ್ಸಿಗಳು ಕೋಟ್ಯಂತರ ರೂ. ಅವ್ಯವಹಾರ ಮಾಡಿದರೂ ಕ್ರಮ ಆಗುತ್ತಿಲ್ಲ. ಸಂಸದ, ಶಾಸಕರೇ ಹೊರ ಜಿಲ್ಲೆಯ ಗುತ್ತಿಗೆದಾರರ ಹೆಸರಿನಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ಅವರ ಗಮನಕ್ಕೆ ತಂದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ನಾಡಿದ್ದು ಕೊಪ್ಪಳಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಅವರಿಗೆ ಮನವಿ ಸಲ್ಲಿಸುತ್ತೇವೆ. ಮುಂದೆ ಹೋರಾಟ ನಡೆಸುವುದಾಗಿ ತಿಳಿಸಿದರು.
ಗುತ್ತಿಗೆದಾರರಾದ ದೇವಪ್ಪ ಅರಿಕೇರಿ, ಯಮನೂರಪ್ಪ ನಡವಲಮನಿ, ಟಿ,ರತ್ನಾಕರ, ಕೃಷ್ಣ ಇಟ್ಟಂಗಿ, ಹನುಮೇಶ ಕಡೆಮನಿ, ಎಲ್.ಎಂ.ಮಲ್ಲಯ್ಯ ಇತರರಿದ್ದರು.