ಜಿಲ್ಲೆ

ತಾಯಿ-ಮಗು ಆರೋಗ್ಯ ರಕ್ಷಣೆಗೆ ಕಿಲ್ಕಾರಿ ಸೇವೆ

ಕೊಪ್ಪಳ: ತಾಯಿ-ಶಿಶು ಮರಣ ತಗ್ಗಿಸಲು ಹಾಗೂ ಗರ್ಭಿಣಿಯರಿಗೆ ಗುಣಟಮ್ಟದ ಆರೈಕೆ ಮಾಹಿತಿ ಒದಗಿಸಲು ಕೇಂದ್ರ ಸರ್ಕಾರ ಕಿಲ್ಕಾರಿ ಸೇವೆ ಆರಂಭಿಸಿದ್ದು ಜಿಲ್ಲೆಯ ಜನರು ಪ್ರಯೋಜನ ಪಡೆದುಕೊಳ್ಳುವಂತೆ ಡಿಎಚ್ಒ ಡಾ.ಟಿ.ಲಿಂಗರಾಜು ತಿಳಿಸಿದ್ದಾರೆ.

ಕಿಲ್ಕಾರಿ ಗರ್ಭಿಣಿ, ಬಾಣಂತಿಯರಿಗೆ ತಂದಿರುವ ಉಚಿತ ಆರೋಗ್ಯ ಮಾಹಿತಿ ನೀಡುವ ಮೊಬೈಲ್ ಸೇವೆ. ಆರ್ಸಿಎಚ್ ತಂತ್ರಾಂಶದಲ್ಲಿ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಗರ್ಭಾವಸ್ಥೆ, ಬಾಣಂತಿ ಮತ್ತು ಶಿಶು ಆರೋಗ್ಯ ಮಾಹಿತಿ ತಲುಪಿಸಲಿದೆ. ಗರ್ಭ ಧರಿಸಿದ ನಾಲ್ಕೆನೇ ತಿಂಗಳಿಂದ ಮಗುವಿನ ಜನ್ಮ ದಿನದವರೆಗೆ ಸೇವೆ ಸಿಗಲಿದೆ. ಗರ್ಭಧಾರಣೆ, ಮಗುವಿನ ಜನನ ಮಾಹಿತಿ ಆಶಾ ಕಾರ್ಯಕರ್ತೆ, ಪ್ರಾಥಮಿಕ, ಸಮುದಾಯ ಆರೋಗ್ಯ ಅಧಿಕಾರಿಗಳ ಬಳಿ ನೋಂದಾಯಿಸಬೇಕು. ಜತೆಗೆ ಕಿಲ್ಕಾರಿ ಸೇವೆ ಪಡೆಯಲು ಮೊಬೈಲ್ ಸಂಖ್ಯೆ ನೀಡಬೇಕು. ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ 0124-4451660 ಈ ನಂಬರ್ನಿಂದ ಡಾ.ಅನಿತಾ ಹೆಸರಿನಲ್ಲಿ ಪ್ರತಿ ವಾರಕ್ಕೊಮ್ಮೆ ಕರೆ ಬರಲಿದೆ.

ಕರೆ ಸ್ವೀಕರಿಸಿ ಆಲಿಸಬೇಕು. ಒಂದೊಮ್ಮೆ ಕರೆ ತಪ್ಪಿಸಿಕೊಂಡರೆ ಅಥವಾ ಮಾಹಿತಿ ಮತ್ತೊಮ್ಮೆ ಕೇಳಲು ಬಯಸಿದಲ್ಲಿ 14423 ಸಂಖ್ಯೆಗೆ ಕರೆ ಮಾಡಿ ಆಲಿಸಬಹುದು. ಕರೆಯಲ್ಲಿ ಗರ್ಭಧಾರಣೆ ಅವಧಿಗೆ ಸಂಬಂಧಿಸಿದ ಆರೋಗ್ಯ ಮಾಹಿತಿಗಳು, ಮಗು ಜನಿಸಿದ ನಂತರ ಶಿಶುವಿನ ವಯಸ್ಸಿಗೆ ಸಂಭಂಧಿಸಿದ ಆರೋಗ್ಯ ಮಾಹಿತಿ ಮತ್ತು ಸಲಹೆ ನೀಡಲಾಗುತ್ತದೆ. ಅಲ್ಲದೆ ಕುಟುಂಬ ಕಲ್ಯಾಣ ಯೋಜನೆಗಳು, ಮಗು 1 ವರ್ಷ ಆಗುವವರೆಗೆ ನೀಡಬೇಕಾದ ಲಸಿಕೆಗಳ ಮಾಹಿತಿ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.