ಕೊಪ್ಪಳದಲ್ಲಿ ಸೋಮವಾರ ಸರತಿಯಲ್ಲಿ ಮತದಾನ ಮಾಡಿದ ಮತದಾರರು. 
ಜಿಲ್ಲೆ

ಪದವೀಧರರಿಂದ ಜಿಲ್ಲಾದ್ಯಂತ ಮತದಾನ, ಹಕ್ಕು ಚಲಾಯಿಸಿದ ಶಿಕ್ಷಕರು, ಹಿರಿಯರು

Kopala - Raveendra V K

ಕೊಪ್ಪಳ: ವಿಧಾನ ಪರಿಷತ್​ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಜಿಲ್ಲಾದ್ಯಂತ ಸೋಮವಾರ ಶಾಂತಿಯುತ ಮತದಾನ ನಡೆಯಿತು. ಪದವೀಧರರು, ಶಿಕ್ಷಕರು, ಹಿರಿಯರು ಸರತಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಜಿಲ್ಲಾದ್ಯಂತ 24 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತದಾರರು ಮತಗಟ್ಟೆಗಳತ್ತ ಆಗಮಿಸಿ ಮತ ಚಲಾಯಿಸಿದ್ದು ಕಂಡುಬಂತು. ಕೊಪ್ಪಳ ನಗರ ಸೇರಿ ತಾಲೂಕಿನಲ್ಲಿ 6 ಮತಟ್ಟೆಗಳಲ್ಲಿ ಮತದಾನ ನಡೆಯಿತು. ಮತಗಟ್ಟೆಗಳ ಮುಂದೆ ಪೆಂಡಾಲ್​ ಹಾಕಿ ಮತದಾರರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಯಿತು. ಭಾನುವಾರ ರಾತ್ರಿಯಿಡಿ ಮಳೆ ಸುರಿದಿದ್ದರಿಂದ ಸೋಮವಾರ ಸೂರ್ಯನ ಪ್ರಖರತೆ ಅಷ್ಟಾಗಿ ಇರಲಿಲ್ಲ. ಹೀಗಾಗಿ ಇಡೀ ದಿನ ಮತ ಚಲಾಯಿಸಲು ಮತದಾರರು ಮತಗಟ್ಟೆಗಳತ್ತ ಆಗಮಿಸಲು ಅನುಕೂಲವಾಯಿತು.

ಕೊಪ್ಪಳದ ತಾಪಂ ಕಚೇರಿ ಮತಗಟ್ಟೆಯಲ್ಲಿ ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ ಹಾಗೂ ಇತರ ಅಧಿಕಾರಿಗಳು ಸರತಿಯಲ್ಲಿ ನಿಂತು ಹಕ್ಕು ಚಲಾಯಿಸಿದರು. 80 ವರ್ಷದ ಹಿರಿಯ ಮತದಾರೆ ಶೋಭಾ ಅಗಡಿ ಅವರೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು. ಎಂಎಲ್ಸಿ ಹೇಮಲತಾ ನಾಯಕ ಪತಿ ಹಾಗೂ ಪುತ್ರನೊಂದಿಗೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.

ವೀಕ್ಷಕರ ಭೇಟಿ
ಕೊಪ್ಪಳದ ತಾಪಂ ಕಚೇರಿ ಮತಗಟ್ಟೆ 128 ಹಾಗೂ 128ಎ ಗೆ ವಿಪ ಚುನಾವಣಾ ವೀಕ್ಷಕ ಮಹೇಶ್ವರ ರಾವ್​ ಭೇಟಿ ನೀಡಿ ಪರಿಶೀಲಿಸಿದರು. ಮತದಾನ ಪ್ರಕ್ರಿಯೆ, ಅಧಿಕಾರಿಗಳ ತಯಾರಿ, ಮತದಾರರ ಪಟ್ಟಿ ಇನ್ನಿತರ ವಿಷಯಗಳ ಕುರಿತು ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಮಾಹಿತಿ ಪಡೆದರು. ಡಿಸಿ ನಲಿನ್​ ಅತುಲ್​ ಜತೆಗಿದ್ದು, ಮತದಾನ ಕಾರ್ಯದ ಬಗ್ಗೆ ವಿವರಿಸಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಹೊಸಪೇಟೆ ಎಸಿ ಮಹಮದ್​ ಅಲಿ ಅಕ್ರಂ ಷಹಾ, ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಇದ್ದರು.