ಕೊಪ್ಪಳ ತಾಲೂಕಿನ ಲಿಂಗದಳ್ಳಿ ವಸತಿ ಶಾಲೆ ಲೋಕಾರ್ಪಣೆ ಕಾರ್ಯಕ್ರಮವನ್ನು ಬುಧವಾರ ಶಾಸಕ ರಾವೇಂದ್ರ ಹಿಟ್ನಾಳ ಉದ್ಘಾಟಿಸಿದರು. ಮಾಜಿ ಸಂಸದ ಸಂಗಣ್ಣ ಕರಡಿ, ಬೇವಿನಳ್ಳಿ ಗ್ರಾಪಂ ಅಧ್ಯೆ ಶಿವಮ್ಮ ನಾಯಕ, ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಪ್ರಾಚಾರ್ಯ ದೊಡ್ಡಪ್ಪ ವಾಲ್ಮೀಕಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರನ್​ ಇದ್ದರು. 
ಜಿಲ್ಲೆ

ಗುಣಮಟ್ಟದ ಶಿಕ್ಷಣ ನೀಡಿ: ಶಾಸಕ ಹಿಟ್ನಾಳ ಸಲಹೆ

ಕೊಪ್ಪಳ: ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ. ಶಾಲೆಗಳಲ್ಲಿ ಓದುವಂಥ ವಾತಾವರಣ ನಿರ್ಮಿಸಿ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಡಾ.ಎಪಿಜೆ ಅಬ್ದುಲ್​ ಕಲಾಂ ವಸತಿ ಶಾಲೆ ನೂತನ ಕಟ್ಟಡ ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇಡೀ ರಾಜ್ಯಕ್ಕೆ ಎರಡು ವಸತಿ ಶಾಲೆ ಮಂಜೂರಾಗಿವೆ. ಅವುಗಳಲ್ಲಿ ನಮ್ಮದು ಒಂದು. ಸಿಎಂ ಸಿದ್ದರಾಮಯ್ಯ ನನ್ನ ಮನವಿ ಮೇರೆಗೆ 25 ಕೋಟಿ ರೂ. ಅನುದಾನದ ಶಾಲೆ ಮಂಜೂರು ಮಾಡಿದ್ದಾರೆ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. 12 ಮುರಾರ್ಜಿ ದೇಸಾಯಿ, 4 ಹಿಂದುಳಿದ, 6 ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ಕೊಪ್ಪಳ ವಿವಿಯನ್ನು ಕೊಪ್ಪಳದಲ್ಲಿ ಆರಂಭಿಸಿ ಅಭಿವೃದ್ಧಿಪಡಿಸಲು ಸಿಎಂಗೆ ಮನವಿ ಮಾಡಿರುವೆ. ಈಗಾಗಲೇ 194 ಕೋಟಿ ರೂ.ನಲ್ಲಿ ಕಿಮ್ಸ್​ಗೆ 450 ಹಾಸಿಗೆ ಆಸ್ಪತ್ರೆ ನಿರ್ಮಿಸಲಾಗಿದೆ.

ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಕೊಪ್ಪಳ&ಭಾಗ್ಯನಗರಕ್ಕೆ ಕುಡಿವ ನೀರು, ಗ್ರಾಮೀಣ ಭಾಗಕ್ಕೆ ಶಾಶ್ವತ ಕುಡಿವ ನೀರು ಕಲ್ಪಿಸುವ ಯೋಜನೆಗಳು ಮುಂದುವರೆದಿವೆ. ಅಳವಂಡಿ&ಬೆಟಗೇರಿ, ಬಹದ್ದೂರಬಮಡಿ&ನವಲಕಲ್​ಮಟ್ಟಿ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದೆಂದು ಭರವಸೆ ನೀಡಿದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಈ ಹಿಂದೆ ಶಿಕ್ಷಣ ಪಡೆಯಲು ದೂರದ ನಗರಗಳಿಗೆ ಹೋಗಬೇಕಿತ್ತು. ಆದರೆ, ಇಂದು ಅಂಥ ಸ್ಥಿತಿ ಇಲ್ಲ. ಸರ್ಕಾರ ಹಲವು ಸೌಲಭ್ಯ ಕಲ್ಪಿಸಿದೆ. ಇಂದು ಹಾಸ್ಟೆಲ್​ ಉದ್ಘಾಟನೆಯಲ್ಲಿ ಭಾಗಿಯಾಗಿದ್ದು ಖುಷಿ ತಂದಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬಾರದು. ನಮ್ಮ ಅವಧಿಯಲ್ಲಿ ಮಾಡಿದ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿಯುತ್ತವೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸುರೇಶ ಕೋಕರೆ, ಕಾಂಗ್ರೆಸ್​ ಮುಖಂಡ ಕೃಷ್ಣಾರೆಡ್ಡಿ ಗಲಬಿ ಮಾತನಾಡಿದರು.

ಬೇವಿನಳ್ಳಿ ಗ್ರಾಪಂ ಅಧ್ಯೆ ಶಿವಮ್ಮ ನಾಯಕ, ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಪ್ರಾಚಾರ್ಯ ದೊಡ್ಡಪ್ಪ ವಾಲ್ಮೀಕಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರನ್​, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್​ ಪಾಷಾ ಪಲ್ಟನ್​, ಪ್ರಮುಖರಾದ ಎಸ್​.ಬಿ ನಾಗರಳ್ಳಿ, ಟಿ.ಜನಾರ್ದನ ಹುಲಗಿ, ಗೂಳಪ್ಪ ಹಲಗೇರಿ, ರಾಮಣ್ಣ ಚೌಡ್ಕಿ, ಎಂ.ಕಾಟನ್​ ಪಾಷಾ, ಕೆ.ಎಂ ಸೈಯದ್​, ಗಾಳೆಪ್ಪ ಪೂಜಾರ ಇತರರಿದ್ದರು.