ಜಿಲ್ಲೆ

ರಾಬಕೊವಿಗೆ ಹಿಟ್ನಾಳ ನಾಮ ನಿರ್ದೇಶನ

ಕೊಪ್ಪಳ: ರಾಯಚೂರು&ಬಳ್ಳಾರಿ&ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ಅಧ್ಯಕ್ಷ&ಉಪಾಧ್ಯಕ್ಷ ಚುನಾವಣೆಗೆ ದಿನ ಸಮೀಪಿಸಿದಂತೆ ರಂಗೇರುತ್ತಿದೆ. ಸಹಕಾರ ಇಲಾಖೆ ಒಕ್ಕೂಟಕ್ಕೆ ಶಾಸಕ ರಾವೇಂದ್ರ ಹಿಟ್ನಾಳ ಅವರನ್ನು ನಾಮನಿರ್ದೇಶನಗೊಳಿಸಿ ಮಂಗಳವಾರ ಆದೇಶಿಸಿದ್ದು, ಹಿಟ್ನಾಳ ಹಾದಿ ಸುಗಮವಾಗಿದೆ.

ಸತತ ಮೂರು ಅವಧಿಗೆ ಶಾಸಕರಾಗಿರುವ ಹಿಟ್ನಾಳ ಸಚಿವರಾಗಲು ಹವಣಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ ಹಿರಿತನ, ಜಾತಿ ಸಮೀಕರಣ, ಜಿಲ್ಲಾವಾರು ಆದ್ಯತೆ ಸೇರಿ ಇನ್ನಿತರ ಕಾರಣಗಳಿಗೆ ಮಂತ್ರಿಗಿರಿ ಒಲಿದಿಲ್ಲ. ಸಿಎಂ ಬದಲಾವಣೆ ಬಳಿಕ ಹಿಟ್ನಾಳ್​ಗೆ ಸಚಿವಗಿರಿ ಯೋಗವಿದೆ ಎಂಬ ಮಾತು ಅವರ ಆಪ್ತ ವಲಯದಲ್ಲಿ ಹರಿದಾಡುತ್ತಿದ್ದವು. ಇತ್ತೀಚೆಗೆ ಸ್ವತ@ ಸಿಎಂ ಸಿದ್ದರಾಮಯ್ಯ ಅವರೇ ತಾವು ಪೂರ್ಣಾವಧಿಗೆ ಮುಖ್ಯಮಂತ್ರಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಅಧಿಕಾರ ಬದಲಾವಣೆ ಮಾತುಗಳು ನಿಂತಿಲ್ಲ. ಇದರ ನಡುವೆ ಸಹಕಾರ ರಂಗದ ಮೂಲಕ ಅಧಿಕಾರ ವಶಕ್ಕೆ ಹಿಟ್ನಾಳ ಮುಂದಡಿ ಇಟ್ಟಿದ್ದಾರೆ.

ಹೀಗಾಗಿ ಇತ್ತೀಚೆಗೆ ನಡೆದ ರಾಬಕೊವಿ ಒಕ್ಕೂಟ ನಿರ್ದೇಶಕರ ಚುನಾವಣೆಗೂ ಸ್ಪರ್ಧಿಸದ ರಾವೇಂದ್ರ, ಏಕಾಏಕಿ ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಈ ಮೂಲಕ ಅಧ್ಯಕ್ಷ ಸ್ಥಾನ ಆಕಾಂ, ಮಾಜಿ ಶಾಸಕ ಭೀಮಾನಾಯ್ಕ್​ಗೆ ಮೊದಲ ಹಂತದಲ್ಲಿ ಚೆಕ್​ಮೇಟ್​ ನೀಡಿದ್ದಾರೆ. ಜು.25ರಂದು ಒಕ್ಕೂಟ ಅಧ್ಯಕ್ಷ&ಉಪಾಧ್ಯಕ್ಷ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಶಾಸಕ ಹಿಟ್ನಾಳ ಸ್ಪರ್ಧಿಸಿ ಅಧ್ಯಕ್ಷರಾಗಲು ತಂತ್ರ ಹೆಣೆದಿದ್ದು, ಅದಕ್ಕೆ ಬೇಕಾದ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಒಕ್ಕೂಟಕ್ಕೆ ಜಿಲ್ಲೆಯಗಳಿಂದ ತಲಾ ನಾಲ್ವರಂತೆ ಒಟ್ಟು 12 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಇವರಲ್ಲಿ ರಾಯಚೂರು, ಕೊಪ್ಪಳ ನಿದೇಶಕರು ಹಿಟ್ನಾಳ ಬೆಂಬಲಕ್ಕೆ ನಿಂತಿದ್ದಾರೆ.

ಒಕ್ಕೂಟಕ್ಕೆ 12 ಚುನಾಯಿತ ನಿರ್ದೇಶಕರು, ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ, ಸಹಕಾರ, ಪಶುಸಂಗೋಪನೆ ಪ್ರತಿನಿಧಿಯೊಬ್ಬರು, ಒಕ್ಕೂಟ ಎಂಡಿ, ನಾಮನಿರ್ದೇಶಿತ ಸದಸ್ಯ ಅಧ್ಯಕ್ಷ&ಉಪಾಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಬಹುದು. ಒಟ್ಟು 17 ಮತಗಳಿದ್ದು, ಬಹುಮತ ಪಡೆಯಲು 9 ಮತಗಳನ್ನು ಪಡೆಯಬೇಕಿದೆ. ಏಳು ನಿರ್ದೇಶಕರು, ಹಿಟ್ನಾಳ, ಸಹಕಾರ, ಪಶುಸಂಗೋಪನೆ ಇಲಾಖೆ ಪ್ರತಿನಿಧಿಗಳ ಮತ ಪಡೆದು ಹಿಟ್ನಾಳ ಸುಲಭ ದಡ ಸೇರುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಅಧಿಕಾರೇತರ ಸದಸ್ಯರಾಗಿ ನೇಮಿಸುವ ಮೂಲಕ ಸರ್ಕಾರ ಹಿಟ್ನಾಳಗೆ ಬೆಂಬಲ ನೀಡಿದ್ದು, ಚುನಾಯಿತರನ್ನು ಹೊರತುಪಡಿಸಿ ಉಳಿದೆಲ್ಲರು ಸಹಜವಾಗಿ ಸರ್ಕಾರ ಸೂಚಿಸುವವರಿಗೆ ಮತ ಚಲಾಯಿಸಲಿದ್ದಾರೆ. ಹೀಗಾಗಿ ರಾಬಕೊವಿ ಗದ್ದುಗೆ ಏರಲು ಹಿಟ್ನಾಳ ಹಾದಿ ಬಹುತೇಕ ಸುಗಮವಾಗಿದೆ ಎನ್ನಬಹುದು.