ಕೊಪ್ಪಳ: ಅರಸಿನಕೇರಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಯಾವುದೇ ಕಾರಣಕ್ಕೂ ಅಣು ವಿದ್ಯುತ್ ಸ್ಥಾವರ ಆಗಲು ಬಿಡುವುದಿಲ್ಲವೆಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭರವಸೆ ನೀಡಿದರು.
ತಾಲೂಕಿನ ಅರಸಿನಕೇರಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಜನರನ್ನುದ್ದೇಶಿಸಿ ಮಾತನಾಡಿದರು.
ಕೇಂದ್ರದಲ್ಲಿ ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಈ ಭಾಗದ ಸಮಸ್ಯೆಗಳನ್ನು ಕೇಂದ್ರ ನಾಯಕರ ಗಮನಕ್ಕೆ ತರುವೆ. ಅಣು ವಿದ್ಯುತ್ ಸ್ಥಾವರ ಆರಂಭಕ್ಕೆ ತಯಾರಿ ನಡೆದಿದೆ ಎಂದು ಹೇಳಿದ್ದೀರಿ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುವೆ. ಯಾವುದೇ ಕಾರಣಕ್ಕೂ ಇಲ್ಲಿ ಸ್ಥಾವರ ಆಗಲು ಬಿಡುವುದಿಲ್ಲ. ಜನಾಭಿಪ್ರಾಯ, ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವೆ ಎಂದರು.
ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಪ್ರಮುಖರಾದ ಮನೋಹರಗೌಡ ಹೇರೂರು, ಡಿ.ಕೆ.ಆಗೋಲಿ, ಮಹಾಂತೇಶ ಸಂಗಟಿ, ಮಂಜುನಾಥ ಗೊಂದಿ, ಶರಣಯ್ಯ ಹಿರೇಮಠ, ಸೋಮಶೇಖರ ನಾಯ್ಕ ಹಾಗೂ ಇತರರಿದ್ದರು.