ಕೊಪ್ಪಳ: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆ.15ರಿಂದ 20ವರೆಗೆ ಹಮ್ಮಿಕೊಂಡಿರುವ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ಹಾಗೂ ಸ್ವದೇಶಿ&ವಿದೇಶಿ ಹಣ್ಣಿನ ಸಸಿಗಳ ಪರಿಚಯ, ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಚಿವ ಶಿವರಾಜ ತಂಗಡಗಿ ಶುಕ್ರವಾರ ಚಾಲನೆ ನೀಡಿದರು.
ಮಾವು, ಲಿಂಬೆ, ಮೊಸಂಬೆ, ಹಲಸು, ಕಿತ್ತಳೆ, ಚೈನಿಸ್ ಕಿತ್ತಳೆ, ಪೇರಲ, ತೆಂಗು, ದಾಳಿಂಬೆ, ಅಂಜೂರ, ವಾಟರ್ ಆಪಲ್, ಲಿಚ್ಚಿ, ಬೀಜರಹಿತ ಲಿಂಬೆ, ರಾಮಫಲ, ಲಕ್ಷ$್ಮಣ ಫಲ, ವಿವಿಧ ಹಣ್ಣುಗಳ ಮತ್ತು ಕರಿಬೇವು, ವಿಳ್ಯೆದೆಲೆ ಸಸಿಗಳು, ಸಾಂಬಾರು ಪದಾರ್ಥ ಬೆಳೆಗಳಾದ ದಾಲ್ಚಿನ್ನಿ, ಲವಂಗ, ಏಲಕ್ಕಿ, ಕಾಳು ಮೆಣಸು ಸಸಿಗಳು ಹಾಗೂ ಅಲಂಕಾರಿಕ ಸಸಿಗಳನ್ನು ವೀಸಿದರು.
ಸಸ್ಯಗಾರದಲ್ಲಿ ಉತ್ಪಾದಿಸಿದ ಸಸಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕಡಿಮೆ ಖರ್ಚು, ಕಡಿಮೆ ನಿರ್ವಹಣೆ ಅಧಿಕ ಲಾಭ ಬರುವ ಬೆಳೆ ಪರಿಚಯಿಸಲಾಗುತ್ತಿದೆ. ರೈತರಿಗೆ ಫ್ಲೋರೋಜಾ ಕಂಪನಿಯೊಂದಿಗೆ ಹಲಸಿನ ಬೆಳೆ ಒಪ್ಪಂದ ಕೃಷಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಗೆ ಹೊಂದುವ ಹೊಸ ಸೇಬು ಹಣ್ಣಿನ ಅನಾ ತಳಿ ಹಾಗೂ ಜಗತ್ತಿನ ದುಬಾರಿ ಮಾವಿನ ತಳಿ ಮಿಯಾಜಾಕಿ, ಮೆಕಡೋಮಿಯಾ ಕಸಿ ಸಸಿಗಳನ್ನು ಮೊದಲ ಬಾರಿಗೆ ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ.
ಸಾವಯವ ಉತ್ಪನ್ನಗಳಾದ ಪಂಚಗವ್ಯ, ಗೋ ಕೃಪಾಮೃತ, ಜೀವಾಮೃತ, ಬೀಜಾಮೃತ, ನೀಮಾಸ್ತ್ರ, ಘನ ಜೀವಾಮೃತ, ಅಗ್ನಿಅಸ್ತ್ರ, ಬ್ರಹ್ಮಾಸ್ತ್ರ, ದಶಪರ್ಣಿ ಕಷಾಯ, ದಶಗವ್ಯ, ಹ್ಯುಮಿಕ್ ಆಸಿಡ್, ಬಿಲ್ವ ಪತ್ರರಸಾಯನ, ಬೇವಿನ ಬೀಜದ ಸಾರ, ಸಂಜೀವಕ, ಅಮೃತಪಾನಿ, ಎರೆಹುಳ ಗೊಬ್ಬರ, ಎರೆಜಲ, ಬೇವಿನ ಹಿಂಡಿ ಹಾಗೂ ಮೀನಿನಿಂದ ತಯಾರಿಸಿದ ಔಷಧಗಳನ್ನು ಪ್ರಾತ್ಯಾಕ್ಷಿಕೆ ರೂಪದಲ್ಲಿ ರೈತರಿಗೆ ಪರಿಚಯಿಸಲಾಗುತ್ತಿದೆ.
ಜತೆಗೆ ಮೀನು ಸಾಕಾಣೆ, ಪಾಲಿಹೌಸ್, ನೆರಳು ಪರದೆ, ವೀಡ್ ಮ್ಯಾಟ್, ಕ್ರಾಪ್ಕವರ್ ಜತೆಗೆ ಹೊಸ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ. ಸಾರ್ವಜನಿಕರಿಗೆ ಸೆಲ್ಫಿ ಪಾಯಿಂಟ್ ಅಳವಡಿಸಿದ್ದು ಆಕರ್ಷಕವಾಗಿದೆ. ಶಾಸಕ ರಾವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಂಟಿಕೃಷಿ ನಿರ್ದೇಶಕ ಟಿ.ಎಸ್., ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ದೊಡ್ಡಪತ್ತಾರ ಇತರರಿದ್ದರು.