ಜಿಲ್ಲೆ

ಬಿಜೆಪಿಗರದ್ದು ಸದ್ದಾಂ ಹುಸೇನ್ ಆಡಳಿತ, ಸಚಿವ‌ ತಂಗಡಗಿ ಆರೋಪ

ಕೊಪ್ಪಳ: ಬಿಜೆಪಿಗರದ್ದು ಸದ್ದಾಂ ಹುಸೇನ್ ಆಡಳಿತ. ನಮ್ಮದು ಸಿದ್ದರಾಮಯ್ಯನ ಸರ್ಕಾರದ ಆಡಳಿತ. ಸರ್ವರ‌ ಅಭಿವೃದ್ಧಿ ಪರ ಆಡಳಿತ. ಹಿಂದುಳಿದ ವರ್ಗಗಳ ಸಮೀಕ್ಷೆ ಸೆ.22ರಿಂದ‌ ಆರಂಭವಾಗಲಿದೆ. ಹೀಗಿರುವಾಗ ಈಗಲೇ ಆತುರದಲ್ಲಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲವೆಂದು ಗರಂ ಆದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿಗರಿಗೆ ಆತುರ ಜಾಸ್ತಿ. ಉಪ ಜಾತಿಗಳ ಹೆಸರನ್ನು ನಾವು ಸೇರಿಸಿಲ್ಲ. ಕೆಲವರು ಬಂದು ಮನವಿ ಮಾಡಿದ್ದಕ್ಕೆ ಆಯೋಗ ಕಲಂ ಮಾಡಿದೆ. ನಾವು ಯಾರಿಗೂ ಇದೇ ಧರ್ಮ, ಜಾತಿ ಹೆಸರು ಬರೆಸಿ ಎಂದು ಒತ್ತಡ ಹೇರಿಲ್ಲ. ಜನರು ಸರ್ವ ಸ್ವತಂತ್ರರು. ಬುದ್ಧಿವಂತರು. ಅವರ ಧರ್ಮ, ಜಾತಿ ಯಾವುದೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಅದನ್ನೇ ಬರೆಸುತ್ತಾರೆ. ಆಯಾ ಸಮುದಾಯ ಸ್ವಾಮೀಜಿಗಳೂ ಸಭೆ ನಡೆಸಿ ಇಂಥದ್ದೇ ಜಾತಿ ಹೆಸರು ಬರೆಸಿ ಎಂದು ಅವರವರ ಸಮುದಾಯದವರಿಗೆ ಕರೆ ನೀಡುತ್ತಿದ್ದಾರೆ. ಏನಾದರೂ ಸಲಹೆಗಳಿದ್ದರೆ ಆಯೋಗಕ್ಕೆ ನೀಡಲಿ. ಅದು ಬಿಟ್ಟು ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ. ಎಲ್ಲರನ್ನು ಹಿಡಿದಿಡಲು ಕಮಲ ನಾಯಕರು ಯತ್ನಿಸುವುದು ಅತಿರೇಕದದ ವರ್ತನೆ ಎಂದು ಕಿಡಿಕಾರಿದರು.

ಸಮೀಕ್ಷೆಗೆ ನೇಮಕಗೊಂಡವರಿಗೆ ಗೌರವಧನ ನಿಗದಿಯಾಗಿದೆ. ಈ‌ಬಗ್ಗೆ ಆಯೋಗವೂ ಅವರಿಗೆ ತಿಳಿಸಿದೆ. ಆಶಾಗಳಿಗೆ ಗೌರವಧನ ನೀಡುವ ಬಗ್ಗೆ ಆಯೋಗದಿಂದ ಮಾಹಿತಿ ಪಡೆಯುವೆ. ಜನರು ಆತಂಕ ಪಡಬೇಕಿಲ್ಲ. ಸಮೀಕ್ಷೆಗೂ ಮುನ್ನ ಆಶಾಗಳು ನಿಮ್ಮ ಮನೆಗೆ ಬಂದು ಸಮೀಕ್ಷೆ ಮಾಹಿತಿ ನೀಡುತ್ತಾರೆ. ಏನೇನು ಪ್ರಶ್ನಾವಳಿಗಳಿವೆ, ಯಾವ ದಾಖಲೆ ಬೇಕು, ಮಾಹಿತಿ‌ ಹೇಗೆ ಒದಗಿಸಬೇಕೆಂದು ವಿವರಿಸುವರು. ತಮ್ಮ ಜಾತಿ ಯಾವುದೆಂದು ಸರಿಯಾಗಿ ಮಾಹಿತಿ‌ಒದಗಿಸಿ. ಗಣತಿದಾರರು ನೀವು ನೀಡಿದ ಮಾಹಿತಿಯನ್ನೇ ದಾಖಲಿಸಿಕೊಳ್ಳುತ್ತಾರೆ. ಯಾರ ಹಸ್ತಕ್ಷೇಪವೂ ಇಲ್ಲವೆಂದು ಸ್ಪಷ್ಟಪಡಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಇತರರಿದ್ದರು.

ಅಕ್ರಮ ತನಿಖೆ : ನಗರಸಭೆಯಲ್ಲಿ ಅಕ್ರಮ ಸಂಬಂಧ ಲೋಕಾಯುಕ್ತ ದಾಳಿ ನಡೆದಿದೆ. ಕಾಮಗಾರಿಗಳ ಬಗ್ಗೆ ಪ್ರಗತಿಪರಿಶೀಲನೆ ಮಾಡಿ ಮಾಹಿತಿ ಪಡೆಯುವೆ. ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ ಕುರಿತು ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿದೆ. ತನಿಖೆ ನಡೆಯಲಿ. ಯಾರು ಅಕ್ರಮ ಎಸಗಿದ್ದಾರೋ‌ ಅವರ ವಿರುದ್ಧ ಸೂಕ್ತ ಕ್ರಮ ಆಗಲಿದೆ ಎಂದು ಸಚಿವ ತಂಗಡಗಿ ತಿಳಿಸಿದರು.