ಜಿಲ್ಲೆ

ವಕ್ಫ್​ ಆಸ್ತಿ ಎಂದು ಮೊದಲು ರೈತರಿಗೆ ನೋಟಿಸ್​ ನೀಡಿದ್ದು ಬಿಜೆಪಿಯವರು:ತಂಗಡಗಿ

ಕೊಪ್ಪಳ: ನಾವು ರೈತರಿಗೆ ನೋಟಿಸ್​ ನೀಡಿದ್ದೇವೆಂದು ಬಾಯಿ ಬಡಿದುಕೊಳ್ಳುವ ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗಲೇ 2021ರಲ್ಲಿ ರೈತರ ಜಮೀನಿಗೆ ವಕ್ಫ ಆಸ್ತಿ ಎಂದು ನೋಟಿಸ್​ ನೀಡಿದ್ದಾರೆಂದು ಕನ್ನಡ ಮತ್ತು ಸಂಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಚಾಟಿ ಬೀಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು.

2021ರಲ್ಲಿ ಬಿಜೆಪಿ ಸರ್ಕಾರ ಕೊಪ್ಪಳದಲ್ಲಿ 3,948 ಎಕರೆ ವಕ್ಫ ಆಸ್ತಿ ಕಬಳಿಕೆ ಆಗಿದೆ ಎಂದು 1,089 ಆಸ್ತಿಗಳಿಗೆ ನೋಟಿಸ್​ ನೀಡಿದ್ದಾರೆ. ಈಗ ಆರೋಪ ಮಾಡುವವರು ಆವಾಗ ಕಣ್ಮುಚ್ಚಿ ಕುಳಿತಿದ್ದರಾ? ಅವರು ಮಾಡಿದ ಪ್ರಮಾದ ನಾವು ಸರಿಪಡಿಸುತ್ತೇವೆ. ಈಗಾಗಲೇ ಸಿಎಂ ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರದಲ್ಲಿ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಈ ಬಗ್ಗೆ ಸಂಪುಟದಲ್ಲಿ ಸುದೀರ್ಘವಾಗಿ ಚರ್ಚಿಸಿ ಸರಿಪಡಿಸಲಾಗುವುದು. ಅಲ್ಲಿವರೆಗೆ ರೈತರು ಆತಂಕಪಡುವ ಅಗತ್ಯವಿಲ್ಲ. ನಾವು ನಿಮ್ಮ ಪರ ಇದ್ದೇವೆ ಎಂದು ಅಭಯ ನೀಡಿದರು.

ಬಿಜೆಪಿ ಸರ್ಕಾರವೇ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ತಿರಸ್ಕರಿಸಿದೆ. ಆಗ ಗೋವಿಂದ ಕಾರಜೋಳ ಸೇರಿ ಇತರ ಬಿಜೆಪಿ ದಲಿತ ನಾಯಕರು ಏನು ಮಾಡುತ್ತಿದ್ದರು ? ಸದಾಶಿವ ಆಯೋಗವರದಿಯಲ್ಲಿ ನಿಖರ ಅಂಕಿ ಸಂಖ್ಯೆಗಳಿಲ್ಲವೆಂದು ನಾನು ಹೇಳಿದ್ದೆ. ಸದ್ಯ ಒಳ ಮೀಸಲಾತಿ ಜಾರಿಗೆ ಆಯೋಗ ರಚಿಸಲಾಗಿದೆ. ನಿಖರ ಅಂಕಿ ಅಂಶ ಇಲ್ಲದೇ ಜಾರಿ ಮಾಡಲಾಗದು. ಹರಿಯಾಣ, ತೆಲಂಗಾಣದಲ್ಲೂ ಸಮಿತಿ ರಚಿಸಿ ಜಾರಿಗೆ ಮುಂದಾಗಿದ್ದಾರೆ. ಆಯೋಗ ನೀಡುವ ವರದಿ ಆಧರಿಸಿ ಜಾರಿ ಮಾಡುತ್ತೇವೆ. ಯಾರದೂ ವಿರೋಧ ಇಲ್ಲವೆಂದು ತಿಳಿಸಿದರು.

ಗ್ಯಾರಂಟಿ ಯೋಜನೆ ನಮ್ಮ ಸರ್ಕಾರ ಇರುವವರೆಗೆ ಕೊಟ್ಟೇ ಕೊಡುತ್ತೇವೆ. ಇದರಲ್ಲಿ ಅನುಮಾನ ಇಲ್ಲ. ಬಿಜೆಪಿ, ಸಿ.ಟಿ.ರವಿ ಪಂಕ್ಚರ್​ ಆಗಿದ್ದಾರೆ. ನಾವು, ನಮ್ಮ ಯೋಜನೆಗಳಲ್ಲ. ಸುಖಾ ಸುಮ್ಮನೇ ಆರೋಪಿಸುವುದು ಬಿಜೆಪಿಗರ ಚಾಳಿ. ಅದಕ್ಕೆ ರಾಜ್ಯದ ಜನ ಸೊಪು$್ಪ ಹಾಕುವುದಿಲ್ಲವೆಂದು ಸಮರ್ಥಿಸಿಕೊಂಡರು.

ಭುವನೇಶ್ವರಿ ದೇವಿ ಮೂರ್ತಿ ಮಾಡಲು ಮೂಲ ಸೌಕರ್ಯ ಬೇಕು. ದೆಹಲಿ ಮೂಲದವರ ಬಳಿ ಇದ್ದ ಕಾರಣ ನೀಡಿದ್ದೇವೆ. ಮಹಾತ್ಮ ಗಾಂಧಿ ಮೂರ್ತಿ ಮಾಡಿದ ಕಂಪನಿಗೆ ನೀಡಲಾಗಿದೆ. ಅದರಲ್ಲಿ ಕನ್ನಡದವರು, ದೆಹಲಿಯವರು ಎಂದಿಲ್ಲ. ಅಚ್ಚುಕಟ್ಟಾಗಿ ರೂಪಿಸುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲವಕಾಶ ವಿಸ್ತರಿಸಲಾಗಿದೆ ಎಂದರು.